Total Pageviews

Wednesday, July 20, 2016

ರಂಗಭೂಮಿಯಲ್ಲಿ ಕಾವ್ಯಾನುಭೂತಿ.




ಕಾವ್ಯ , ವಿಮರ್ಶೆ ಮತ್ತು ಅಭಿನಯ ಇವು ಮೂರು ಬಿನ್ನ ಭಿನ್ನ ಕ್ಷೇತ್ರಗಳಾದರೂ ಒಟ್ಟು ಪರಿಣಾಮವನ್ನು ಬೀರುವ ದೃಷ್ಟಿಯಲ್ಲಿ ಇವುಗಳಲ್ಲಿ ಸಮಾನವಾದ ಅಂಶಗಳಿವೆ. ಈ ಮೂರೂ ಕ್ಷೇತ್ರಗಳನ್ನು ಒಟ್ಟಾಗಿ ಬೆಸೆದು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವೊಂದು ಜನವರಿ ಒಂಬತ್ತರಂದು ಬೆಂಗಳೂರಿನ ನಯನ  ರಂಗಮಂದಿರದಲ್ಲಿ ನಡೆಯಿತು.

ರಂಗಭೂಮಿಯಲ್ಲಿ ಬಹುದೊಡ್ಡ ಹೆಸರಾದ ಪ್ರಸನ್ನ ಅವರು ನಿರ್ಧೇಶಿಸಿ, ರಂಗಾಯಣ ತಂಡ ಅಭಿನಯಿಸಿದ ’ ಕಾವ್ಯ ಸಂಚಯ’ ರಂಗಭೂಮಿಯ ಹೊಸ ಪ್ರಯೋಗವೊಂದಕ್ಕೆ ಮುನ್ನುಡಿ ಬರೆಯಿತು.

ರಂಗಾಯಣವು ’ಕಾವ್ಯ ಸಂಚಯ’ದ ಕುರಿತಾಗಿ ತನ್ನ ಕರಪತ್ರದಲ್ಲಿ ಹೀಗೆ ಹೇಳಿಕೊಂಡಿದೆ್;
” ಕನ್ನಡದಲ್ಲಿ ಕಾವ್ಯ ಓದುವ ಪರಂಪರೆಯೇ ನಶಿಸಿ ಹೋಗುತ್ತಿದೆ. ಗಮಕ ಹಳೇ ಕಾವ್ಯಕ್ಕಾಯಿತು. ಕವಿಗಳೇ ಧೀರ ಗಂಭೀರವಾಗಿ ಪದ್ಯವನ್ನು ಓದುವುದು ನವೋದಯಕ್ಕಾಯಿತು.ಈಗ ಕಾವ್ಯವೆಂಬುದು ಸಂಪೂರ್ಣ ಮೂಕವಾಗಿ ಬರಿದೇ ಓದುವ ಕಾವ್ಯವಾಗಿ ಕುಳಿತಿದೆ. ಶಬ್ದವೆಂಬ ಕನ್ನಡ ಪದಕ್ಕೆ ಎರಡು ಅರ್ಥವಿತ್ತು. ಅದು ಶಬ್ದವೂ ಹೌದು, ಪದವೂ ಹೌದು. ಈಗ ಶಬ್ದ ರಹಿತ ನಿಶ್ಯಬ್ದ ಪದ ಮಾತ್ರವಾಗುತ್ತಿದೆ. ಬೇಂದ್ರೆಯವರ ನಂತರ ತನ್ನದೇ ಕವಿತೆಯನ್ನು ಆಕರ್ಷಕವಾಗಿ ಪ್ರೇಕ್ಷಕರೆದುರು ಮಂಡಿಸಬಲ್ಲ ಕವಿಗಳೇ ವಿರಳವಾಗುತ್ತಿದ್ದಾರೆ, ಇವು ಕನ್ನಡ ಸ್ಥಿತಿಯಲ್ಲಿ ಮಾತ್ರವೇ ಅಲ್ಲ.
ಆದರೆ ಕೆಲವು ಭಾರತೀಯ ಭಾಷೆಗಳಲ್ಲಿ ಇದಕ್ಕೊಂದು ಪರಿಹಾರ ಹುಡುಕುವ ಪ್ರಯತ್ನ ನಡೆಯುತ್ತಿದೆ. ಬಂಗಾಲಿಯಲ್ಲಿ ನಟರು ಕವಿತಾವಾಚನ ಮಾಡುವ ಜನಪ್ರಿಯ ಶೈಲಿಯೊಂದು ಜಾರಿಯಲ್ಲಿದೆ ರಂಗಾಯಣದ ಕಾವ್ಯ ಸಂಚಯ ಅಂತಹದ್ದೊಂದು ಹೊಸ ಪ್ರಯತ್ನ.”

ಕಾರ್ಯಕ್ರಮದ ಆರಂಭವೇ ಹೊಸ ರೀತಿಯದಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಅವರು ವೀಣೆ ಮೀಟಿ, ಎರಡು ನಿಮಿಷ ನುಡಿಸಿ ಕಾವ್ಯ ಸಂಚಯಕ್ಕೆ ಚಾಲನೆ ನೀಡಿದರು. ನಂತರ ವೀಣಾ ವಾದಕಿ ವೀಣಾ ವಾರುಣಿಯವರು ’ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ’ ಗೀತೆಯೊಂದಿಗೆ ಕನ್ನಡದ ಸುಪ್ರಸಿದ್ಧ ಕವಿಗಳ ಎರಡ್ಮೂರು ಕವನಗಳನ್ನು ವೀಣೆಯಲ್ಲಿ ನುಡಿಸಿದರು.

ಜಾಗಟೆ ಶಬ್ದದ ಹಿನ್ನೆಲೆಯಲ್ಲಿ ಕತ್ತಲು ತುಂಬಿದ ವೇದಿಕೆಗೆ ಭಾರತೀಯ ಸಂಪ್ರದಾಯದ ಉಡುಪು ತೊಟ್ಟು ಕೈಯ್ಯಲ್ಲಿ ಹಣತೆ ಹಣತೆ ಹಿಡಿದು ಆಗಮಿಸಿದ ಕಲಾವಿದರು ಲಕ್ಷ್ಮೀಶನ ಜೈಮಿನಿ ಭಾರತದ ಪ್ರಾಥನೆಯೊಂದಿಗೆ ಕಾವ್ಯಾಭಿನಯಕ್ಕೆ ನಾಂದಿ ಹಾಡಿದರು. ಅನಂತರ ನೇರವಾಗಿ ’ ಶ್ರೀವನಿತೆಯರಸನೇ ವಿಮಲ ರಾಜೀವ ಪೀಠನ ಪಿತನೆ’ ಎಂಬ ಕುಮಾರವ್ಯಾಸನ ಆರಂಭದ ನಾಂದಿ ಪದ್ಯದ ಭಾಮಿನಿ ಷಟ್ಪದಿಗೆ ಜಿಗಿದರು.

ನವ್ಯ ಕಾವ್ಯದ ಪ್ರಾನಿಧಿಕ ಕವಿಗಳ ಕವನ ಸಂಕಲನ ’ಅಕ್ಷರ ಹೊಸ ಕಾವ್ಯದ’ ದ ಮುನ್ನುಡಿಯಲ್ಲಿ ಲಂಕೇಶ್ ಹೇಳಿದ ಮಾತುಗಳನ್ನು ಕಲಾವಿದೆಯೊಬ್ಬಳು ಉದ್ಧರಿಸುತ್ತಿದ್ದಂತೆ ಕಲಾವಿದನೊಬ್ಬ ಗೋಪಾಲಕೃಷ್ಣ ಅಡಿಗರ ’ಭೂತ’ ಕವನದ ’ ಕಾಡುತ್ತಿವೆ ಭೂತ ಕಾಲದ ಭ್ರೂಣ ಗೂಢಗಳು’ ಎಂದು ರಂಗದ ಮಧ್ಯಕ್ಕೆ ಬರುತ್ತಾನೆ. ಆತನ ಮೇಲೆ ಬೆಳಕು ಕೇಂದ್ರೀಕೃತವಾಗುತ್ತದೆ. ಮತ್ತೆ ಕ್ಲಾವಿದೆಯಿಂದ ಸುಪ್ರಸಿದ್ಧ ವಿಮರ್ಶಕ ದಿ. ಡಿ.ಆರ್.ನಾಗರಾಜ್ ರವರ ’ಶಕ್ತಿ ಶಾರಧೆಯ ಮೇಳ’ ವಿಮರ್ಶಾ ಗ್ರಂಥದ ಸಾಲುಗಳು...

ಹೀಗೆ ಏನನ್ನೋ ಹೇಳ ಹೊರಟಂತೆ ಸಾಗುತ್ತಿದ್ದ ’ಕಾವ್ಯ ಸಂಚಯ’ ಕುವೆಂಪು ಅವರ ’ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಮತ್ತು ಕಲ್ಕಿ’, ಬೇಂದ್ರೆಯ ’ಸಖೀ ಗೀತ’ ಚಂದ್ರಶೇಖರ ಕಂಬಾರರ ’ಪುಷ್ಫರಾಣಿ’, ಕೆ.ಎಸ್. ನರಸಿಂಹಸ್ವಾಮಿಯವರ ’ಗಡಿಯಾರದಂಗಡಿಯ ಮುಂದೆ ಬೆದರಿದ ಕುದುರೆ...’ ಸಿದ್ಧಲಿಂಗಯ್ಯನವರ ’ಕರಾಳ ರಾಣಿಯ ಕಥೆ’ ಪ್ರತಿಭಾನಂದಕುಮಾರರ ’ನಾವು ಹುಡುಗಿಯರೇ ಹೀಗೆ ಕಣೆ ಉಷಾ’ ಕವನಗಳನ್ನು ಪ್ರೇಕ್ಷಕರ ಮನೋರಂಗದಲ್ಲಿ ದೃಶ್ಯವಾಗಿಸಲು ಪ್ರಯತ್ನಿಸಿತು.

ಆದಿ ಕವಿ ಪಂಪನ ’ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ’ ಎಂಬ ಕಾವ್ಯದ ತುಣುಕಿನೊಂದಿಗೆ ಕಾವ್ಯ ಸಂಚಯ ಮುಕ್ತಾಯಗೊಂಡಿತು.

ಸಾಂಕೇತಿಕ ರಂಗಸಜ್ಜಿಕೆಯೊಂದಿಗೆ ರಂಗಪರಿಕರಗಳಿಲ್ಲದೆ ಕಾವ್ಯವನ್ನು ದೃಶ್ಯವಾಗಿಸುವಾಗ ಸಂಗೀತ, ಬೆಳಕು ಮತ್ತು ಕಲಾವಿದರ ಸ್ವರಗಳ್ ಏರಿಳಿತಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಈ ದೃಷ್ಟಿಯಿಂದ ಕಲ್ಕಿ, ಕರಾಳ ರಾಣಿಯ ಕಥೆ ಮತ್ತು ನಾವು ಹುಡುಗಿಯರೇ ಹೀಗೆ ಕಣೆ ಉಷಾ ಈ ಮೂರೂ ದೃಶ್ಯಕಾವ್ಯವೆನಿಸಿಕೊಂಡವು. ಪಂಪನ ಚಂಪೂ ಕಾವ್ಯ ಚರ್ಚ್ ನ ಪ್ರಾಥನಾ ಗೀತೆಯಂತೆ ಗಿಟಾರ್ ನೊಂದಿಗೆ ಮುಕ್ತಾಯ ಕಂಡಿದ್ದು ಸಾಂಕೇತಿಕವಾಗಿತ್ತು.

ಕಾವ್ಯ ಸಂಚಯಕ್ಕೆ ಕವನಗಳನ್ನು ಯಾವ ಮಾನದಂಡದಿಂದ ಆಯ್ಕೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಲಿಲ್ಲ. ವಚನ ಚಳುವಳಿಯ ಪ್ರಾನಿಧಿಕ ಕವನದ ಗೈರು ಹಾಜರಿ ಸ್ಪಷ್ಟವಾಗಿತ್ತು. ಇಲ್ಲಿ ನಾವು ತಿಳಿಯಬೇಕಾದ ವಿಷ್ಯ ಒಂದಿದೆ. ಅಭಿನಯಕ್ಕೊಂದು ಮಿತಿಯಿದೆ. ವಿಮರ್ಶೆಗೊಂದು ಚೌಕಟ್ಟಿದೆ. ಆದರೆ ಕಾವ್ಯ ಈ ಎಲ್ಲಾ ಮಿತಿ ಹಾಗೂ ಚೌಕಟ್ಟುಗಳನ್ನು ಮೀರಿದ್ದು. ಅದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಮಟ್ಟಿನ ಪೂರ್ವ ಸಿದ್ಧತೆ ಬೇಕು. ಅದನ್ನೇ ಕಾವ್ಯಮೀಮಾಂಸಕರು ’ಸಹೃದಯತೆ’ ಅಂದಿದ್ದಾರೆ.
ಪ್ರೇಕ್ಷಕನಿಗೂ ಸಹೃದಯನಿಗೂ ವ್ಯತ್ಯಾಸವಿದೆ. ಕಾವ್ಯ ಓದುಗನ ಅಥವಾ ಕೇಳುಗನ ಕಲ್ಪನಾ ಸಾಮರ್ಥ್ಯವನ್ನು ವಿಸ್ತರಿಸುತ್ತಾ ಬೆಳೆಯುತ್ತದೆ. ಅದನ್ನು ಒಂದು ನಿರ್ಧಿಷ್ಟ ಚೌಕಟ್ಟಿನೊಳಗೆ ತರುವುದು ಕಷ್ಟಸಾಧ್ಯ. ಅಂಥ ಪ್ರಯತ್ನವನ್ನು ರಂಗಾಯಣ ತಂಡ ಮಾಡಿದೆ. ರಂಗಭೂಮಿಯ ಚೌಕಟ್ಟುಗಳು ವಿಸ್ತಾರಗೊಳ್ಳುತ್ತಾ ಹೊಸ ಹೊಸ ಸಾಧ್ಯತೆಗಳ ಹುಡುಕಾಟ್ದಲ್ಲಿ ತೊಡಗಿಸಿಕೊಂಡಿದೆ. ಇದೊಂದು ಆಶಾಧಾಯಕ ಬೆಳವಣಿಗೆ. ಪ್ರಗತಿಪರ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ’ಬಹುಮುಖಿ’ ಸಂಘಟನೆ ಕನ್ನಡ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ’ಕಾವ್ಯ ಸಂಚಯ’ವನ್ನು ರಂಗಾಸಕ್ತರಿಗೆ ನೀಡಿ ಉತ್ತಮ ಕಾರ್ಯ ಮಾಡಿದೆ.

[  ೨೦೦೩ ರ ಜನವರಿ ೨೪ರ ’ಸೂರ್ಯ’ ವಾರಪತ್ರಿಕೆಗಾಗಿ ಬರೆದ ಬರಹ,
ಸೆಲ್ಲರ್ ನಲ್ಲಿದ್ದ ಬೇಡದ ವಸ್ತುಗಳನ್ನು ಗುಜರಿಗೆ ಹಾಕುವಾಗ ಸಿಕ್ಕಿತು. 
ಇನ್ನೂ ಕೆಲವು ಬರಹಗಳಿವೆ. ಇದರ ಹಾಗೆ ಅವಕ್ಕೂ ಒಂದು ಗತಿ ಕಾಣಿಸಬೇಕು! ]



Friday, January 25, 2013

’ಡಿಯರ ಲಿಯರ”- ಶಿಖರ ಹತ್ತಿದ್ದಷ್ಟೆ ಅನುಭವ

ಚಿತ್ರ ಕೃಪೆ; ಅಂತರ್ಜಾಲ
’ ಡಿಯರ್ ಲಿಯರ್’ ರಂಗ ಪ್ರಯೋಗಕ್ಕೆ ಕೈ ಹಾಕಿದಾಗ ನನಗೆ ಅನ್ನಿಸಿದ್ದು ಆತ್ಮಹತ್ಯೆ ಅನಿವಾರ್ಯವಾದರೆ, ತೀರ ಎತ್ತರದ ಶಿಖರದಿಂದ ದುಮುಕೋಣ. ಕೊನೆಯ ಪಕ್ಷ ಹತ್ತಿದ ಅನುಭವಾದರೂ ದಕ್ಕುತ್ತದೆ.’

ಇದು ’ಡಿಯರ್ ಲಿಯರ್’ ನಾಟಕದ ನಿರ್ದೇಶಕ ಎಸ್.ಆರ್.ರಮೇಶ್ ತಮ್ಮ ನಾಟಕ ಪ್ರಯೋಗದ ಪುಸ್ತಿಕೆಯಲ್ಲಿ ಹೇಳಿಕೊಂಡ ಮಾತುಗಳು.
ಇದೇ ಹೋಲಿಕೆಯನ್ನು ಅವರು ಯಾಕೆ ಕೊಟ್ಟುಕೊಂಡ್ರೋ ಗೊತ್ತಿಲ್ಲ. ಆದರೆ ಶಿಖರ ಹತ್ತುವ ಪ್ರಯತ್ನವೊಂದು ಬಹುಮಟ್ಟಿಗೆ ಯಶಸ್ವಿಯಾಗಿದೆ.

ಮೈಸೂರಿನ ಹವ್ಯಾಸಿ ರಂಗಭೂಮಿಯಲ್ಲಿ ಕಳೆದ ಎರಡು ವರ್ಷಗಳಿಂದ ಕ್ರಿಯಾಶೀಲವಾಗಿರುವ ’ ಪರಿವರ್ತನ’ ತಂಡ ಈ ನಾಟಕವನ್ನು ಅಭಿನಯಿಸಿತ್ತು.
ಕರ್ನಾಟಕ ನಾಟಕ ಅಕಾಡಮಿ ಹಮ್ಮಿಕೊಂಡು ಬಂದಿರುವ ತಿಂಗಳ ನಾಟಕ ಮಾಲಿಕೆಯಡಿ ಏಪ್ರೀಲ್ ತಿಂಗಳ ನಾಟಕವಾಗಿ ಎಚ್.ಎಸ್.ಶಿವಪ್ರಕಾಶ್ ಅನುವಾದಿಸಿರುವ ಷೇಕ್ಸ್ಪಿಯರ್ ನ ’ಕಿಂಗ್ ಲಿಯರ್’ ನಾಟಕ ’ ಡಿಯರ್ ಲಿಯರ್’ ಆಗಿ ಪ್ರಯೋಗಗೊಂಡಿತ್ತು.

ಷೇಕ್ಸ್ ಪಿಯರ್ ನ ’ಕಿಂಗ್ ಲಿಯರ್’ ಆತನ ಇತರ ದುರಂತ ನಾಟಕಗಳಂತೆ ಬಹು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ ರಂಗಭೂಮಿಯಲ್ಲಿ ಪ್ರಯೋಗಗೊಂಡಿದ್ದು ವಿರಳ. ಕನ್ನಡ ರಂಗಭೂಮಿಗಂತೂ ಇದು ಹೊಸ ಪ್ರಯತ್ನವಾಗಿರಬೇಕು.
ಷೇಕ್ಸ್ ಪಿಯರ್ ನ ದುರಂತ ನಾಟಕಗಳಲ್ಲಿ ಕಥಾನಾಯಕರಿಗಿಂತ ಖಳನಾಯಕರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಇಲ್ಲಿ ಒಳಿತು ಕೆಡುಕುಗಳ ಸಮತೋಲನವಿರುತ್ತದೆ. ಮನುಷ್ಯಪ್ರಯತ್ನವನ್ನು ಮೀರಿದ ಘಟನೆಗಳು ಜರಗುತ್ತವೆ.

ಆದರೆ ಕಿಂಗ್ ಲಿಯರ್ ನಾಟಕದಲ್ಲಿ ಲಿಯರ್ ನಾಟಕದ ನಾಯಕನಾಗಿ, ಅದರಲ್ಲೂ ಅಸಂಗತ ನಾಯಕನಾಗಿ ಬಿಂಬಿತನಾಗುತ್ತಾನೆ.ತನ್ನ ರಾಜ್ಯವನ್ನು ಮೂವರು ಹೆಣ್ಣುಮಕ್ಕಳಿಗೆ ಸಮನಾಗಿ ಹಂಚಲು ನಿರ್ಧರಿಸಿ ’ನೀವು ನನ್ನನ್ನೆಷ್ಟು ಪ್ರೀತಿಸುತ್ತೀರಿ?’ ಎಂದು ಪ್ರಶ್ನೆ ಹಾಕಿ ಅವರಿಂದ ಉತ್ತರವನ್ನು ಪಡೆಯಬಯಸುತ್ತಾನೆ. ಮೊದಲ ಹೆಣ್ಣುಮಕ್ಕಳಾದ ಗಾನರಿಲ್ ಮತ್ತು ಲೀಗನ್ ತಮ್ಮ ಪ್ರೀತಿಯ ಆಳವನ್ನು ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ. ದೊರೆ ಲಿಯರ್ ಅವರನ್ನು ಪುರಸ್ಕರಿಸುತ್ತಾನೆ. ಆದರೆ ಕೊನೆಯ ಮಗಳು ಕಾರ್ಡಿಲೀಯಾ ತನ್ನ ಪ್ರೀತಿಯನ್ನು ಮಾತುಗಳಲ್ಲಿ ವ್ಯಕ್ತಪಡಿಸಲಾರದಷ್ಟು ಗಾಢವಾಗಿ ತಂದೆಯನ್ನು ಪ್ರೀತಿಸಿರುತ್ತಾಳೆ.

ಕಾರ್ಡಿಲೀಯಾಳ ಮಾತಿನ ಹಿಂದಿನ ಭಾವವನ್ನು ಗ್ರಹಿಸಲಾರದ ದೊರೆ ಅವಳನ್ನು ಶಪಿಸಿ ಪ್ರಾನ್ಸ್ ಗೆ ಅಟ್ಟುತ್ತಾನೆ. ಈ ನಿರ್ಧಾರ ಅವನ ಇಳಿವಯಸ್ಸಿನ ಅಸಹಾಯಕತೆ, ಹಪಹಪಿಕೆ, ಭ್ರಾಂತಿಗೆ ಕಾರಣವಾಗುತ್ತದೆ. ಇಲ್ಲಿ ಬೋಳೆತನ, ನಂಬಿಕೆ ದ್ರೋಹ, ಸಂಬಂಧಗಳ ಶಿಥಿಲತೆ, ಕುಟಿಲ ರಾಜಕಾರಣ ಎಲ್ಲವೂ ಇದೆ.

ಅನೈತಿಕ ಮಗ ಎಡ್ಮಂಡ್ ನ ಕುತಂತ್ರಕ್ಕೆ ಒಳಗಾಗುವ ಗ್ಲೂಸ್ಟರ್, ಒಳ್ಳೆಯತನದ ಪ್ರತೀಕವಾಗಿರುವ ಆತನ ಅಧಿಕೃತ ಪುತ್ರ ಎಡ್ಗರ್, ಲಿಯರ್ ನ ಹಿತೈಸಿ ಕೆಂಟ್ ಎಲ್ಲರೂ ಲಿಯರ್ ನ ಸುತ್ತ ಸುತ್ತುತ್ತಿರುತ್ತಾರೆ.
ಅನುವಾದಕರ ’ಕಿಂಗ್ ಲಿಯರ್’ ನಾಟಕವನ್ನು ನಿರ್ದೇಶಕರು ’ಡಿಯರ್ ಲಿಯರ್’ ಎಂದು ಕರೆದಿರುವುದೇ ಅವರು ನಾಟಕವನ್ನು ಆಪ್ತ ಮಟ್ಟದಲ್ಲಿ ನೋಡಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಂತಿತ್ತು. ಆದರೆ ’ಕಿಂಗ್ ಲಿಯರ್ ಉತ್ತಮ ಅನುವಾದವೇನೂ ಅಲ್ಲ. ಅದು ರಂಗ ಪ್ರಯೋಗದಲ್ಲೂ ಪ್ರತಿಫಲಿಸಿತ್ತು.

ನಾಟಕ ರಚನೆಕಾರನೊಬ್ಬನಿಗೆ ರಂಗಪ್ರಯೋಗದ ಬಗ್ಗೆಯೂ ಆಳ್ವಾದ ಜ್ನಾನವಿದ್ದಾಗ ಅತ್ಯುತ್ತಮ ನಾಟಕವೊಂದು ರೂಪ ಪಡೆಯುವುದು ಸಾಧ್ಯ. ಕಳೆದ ತಿಂಗಳು ಇದೇ ರವೀಂದ್ರ ಕಲಾಕ್ಷೇತ್ರದಲ್ಲಿ ಷೇಕ್ಸ್ ಪಿಯರನ ’ ಹ್ಯಾಮ್ಲೆಟ್’ ನಾಟಕ ಪ್ರದರ್ಶನಗೊಂಡಿತ್ತು. ಕನ್ನಡದ ಸ್ವಂತ ನಾಟಕವೆಂಬಷ್ಟು ಪರಿಪೂರ್ಣವಾಗಿ ಪುನರ್ ಸೃಷ್ಟಿಸಲ್ಪಟ್ಟ ಈ ನಾಟಕ ವರ್ಷದ ಅತ್ಯುತ್ತಮ ರಂಗ ಪ್ರಯೋಗ ಎಂದರೂ ತಪ್ಪಾಗಲಾರದು.

ಒಂದು ರಂಗಪ್ರಯೋಗದಲ್ಲಿ ಕೇಂದ್ರ ಪಾತ್ರಗಳಿರುವಷ್ಟೇ ಮಹತ್ವ ಒಬ್ಬ ಬಾಗಿಲು ಕಾಯುವ ಸೇವಕನ ಪಾತ್ರಕ್ಕೂ ಇರುತ್ತದೆ. ಕೇಂದ್ರ ಪಾತ್ರ ಸಮರ್ಥವಾಗಿ ಮೂಡಿ ಬಂದು ಚಿಕ್ಕಪುಟ್ಟ ಪಾತ್ರಗಳು ಲಯ ತಪ್ಪಿದರೆ ನಾಟಕದ ಒಟ್ಟು ಶಿಲ್ಪಕ್ಕೆ ಭಂಗ ಬರುತ್ತದೆ. ’ ಡಿಯರ್ ಲಿಯರ್’ ನಾಟಕದಲ್ಲಿ ಅಲ್ ಬೆನಿ, ಕಾರ್ನ್ ವಾಲ್ ವರ್ತನೆಗಳು, ಗ್ಲೂಸ್ಟರ್ ನ ಕಣ್ಣು ಕಿತ್ತಾಗ ಸೇವಕ ಆಡುವ ಸಾಂತ್ವನದ ಮಾಟುಗಳು-ಇವೆಲ್ಲಾ ಅವಸರದ ಮಾತು ಒಪ್ಪಿಸುವಿಕೆಯಂತಿದ್ದವು.
ನಾಟಕ ತೆರೆದುಕೊಂಡ ಅಸ್ಥಾನದ ಮೊದಲ ದೃಶ್ಯವೇ ಸಾಮಾನ್ಯವಾಗಿತ್ತು. ರಂಗದ ತುಂಬಾ ಹರಡಿಕೊಂಡಿರುವ ಪಾತ್ರಧಾರಿಗಳಲ್ಲಿ ಏಕಸೂತ್ರತೆಯಿರಲಿಲ್ಲ. ದೊರೆ ಲಿಯರನ ಐಲುತನ ಉಳಿದ ಪಾತ್ರಧಾರಿಗಳಲ್ಲಿ ಸಂಚಲನ ತರುತ್ತಿರಲಿಲ್ಲ. ಅಲ್ ಬೆನಿ ಮತ್ತು ಕಾರ್ನ್ ವಾಲ್ ನ ಉಡುಪುಗಳು ಉಳಿದ ಪಾತ್ರಧಾರಿಗಳ ವಸ್ತ್ರ ವಿನ್ಯಾಸಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಸೌಂಡ್ ಸಿಸ್ಟಂ ಸರಿಯಿರಲಿಲ್ಲ. ಉಚ್ಚಾರಣೆಯಲ್ಲಿ ಶುದ್ಧತೆ ಇರಲಿಲ್ಲ.

ಚಿತ್ರ ಕೃಪೆ; ಅಂತರ್ಜಾಲ
ಕಿಂಗ್ ಲಿಯರ್ ಆಗಿ ಜಯರಾಮ್ ತಾತಾಚಾರ್ ಚ್ನ್ನಾಗಿಯೇ ನಟಿಸಿದ್ದಾರೆ. ಎಡಂಡ್ ಆಗಿ ಮೋಹನ್ ರಾಜ್ ಅಭಿನಯವೂ ಪರವಾಗಿರಲಿಲ್ಲ. ಅವರ ಮಾತಿನ ಸ್ವರಭಾರ ಚಿನ್ನಾಗಿದ್ದರೂ ಅವರ ಕೆಲವು ಮ್ಯಾನರಿಸಂ [ಕೈ ಕೈ ಹೊಸೆಯುವುದು] ಅತಿ ಎನಿಸುತ್ತಿತ್ತು. ’ವೃದ್ಧರ ಪತನ; ತರುಣರ ಉತ್ಥಾನ ಯಾಃ’ ಎಂಬ ಉದ್ಘಾರದಿಂದ ನಾಟಕದ ಗಾಂಭೀರ್ಯಕ್ಕೆ ಧಕ್ಕೆ ಬರುತ್ತಿತ್ತು. ಎಡ್ಗರ್ ತಲೆ ಮರೆಸಿಕೊಂಡು ಹುಚ್ಚ ಟಾಂ ಆಗಿ ಪರಿವರ್ತನೆಯಾದ ಮೇಲೆ ಅವರ ಅಭಿನಯಕ್ಕೆ ಓಘ ಬಂದಿತ್ತು. ಕೈಯ್ಯಲ್ಲಿ ಕೋಲು; ಸೊಂಟಕ್ಕೆ ಸೆಣಬಿನ ನಾರು ಟಾಂ ಪಾತ್ರಕ್ಕೆ ಒಪ್ಪುತ್ತಿತ್ತು. ಕೆಂಟ್ ವೇಷ ಮರೆಸಿಕೊಂಡು ಕಯಸ್ ಆಗಿ ರಾಜನ ಸನಿಹದಲ್ಲೇ ಇದ್ದುಕೊಂಡು ಅವನ ಸಹವರ್ತಿಯಾಗಿರುವ ಪಾತ್ರದಲ್ಲಿ ಅಧ್ಯಾಪಕ್ ಅವರದು ಸಹಜ ಅಭಿನಯ.

ನಾಟಕದಲ್ಲಿ ಲಿಯರ್ ನ ಮೂವರು ಹೆಣ್ಣುಮಕ್ಕಳು ಮಾತ್ರ ಸ್ತ್ರೀ ಪಾತ್ರಗಳು. ಅವುಗಳಲ್ಲಿ ಸತ್ವವೇ ಇರಲಿಲ್ಲ. ಇದ್ದುದರಲ್ಲಿ ಕಾರ್ಡಿಲೀಯಾ ಅಗಿ ನಟಿಸಿದ ಸನ್ನುತ ಪರವಾಗಿಲ್ಲ. ಇನ್ನುಳಿದಂತೆ ನಿಯರ್ ದೊರೆಯ ವಿಮರ್ಶಕನಂತೆ ಬರುವ ವಿದೂಶಕನ ಪಾತ್ರದಲ್ಲಿ ಮುರಳಿ ಶೃಂಗೇರಿ ಚೆನ್ನಾಗಿಯೇ ಮಿಂಚಿದ್ದಾರೆ.
ಬಿಡಿಬಿಡಿಯಾಗಿ ಕೆಲವು ದೃಶ್ಯಗಳು ಚೆನ್ನಾಗಿದ್ದವು ’ ಜ್ನಾನಿಯ ಜೊತೆ ಮಾತಾಡಬೇಕು’ ಎಂದು ಲಿಯರ್ ಟಾಂ ಜೊತೆ ಸಂಭಾಷಿಸುವ ಸನ್ನಿವೇಶ, ಹಾಗೆಯೇ ಟಾಂ, ಕಯಸ್,ಲಿಯರ್ ಸೇರಿಕೊಂಡು ಲಿಯರ ದೊರೆಯ ಹೆಣ್ಣುಮಕ್ಕಳ ಬೊಂಬೆಗಳನ್ನಿಟ್ಟುಕೊಂಡು ವಿಚಾರಣೆ ನಡೆಸುವ ನ್ಯಾಯಾಲಯ ಸನ್ನಿವೇಶ ಉತ್ತಮವಾಗಿ ಮೂಡಿ ಬಂದಿವೆ. ನಾಟ್ಕದಲ್ಲಿ ಕೊಳಲು ನಾದ ಪರಿಣಾಮಕಾರಿಯಾಗಿತ್ತು. ವಿಷಾದಕ್ಕೆ ಶ್ರ್ರುತಿ ಹಿಡಿಯುತ್ತಿತ್ತು. ಆದರೆ ನಾಟಕದ ಒಟ್ಟು ಸಂಗೀತಕ್ಕೆ ಈ ಮಾತು ಹೇಳುವಂತಿರಲಿಲ್ಲ.

ತಿಂಗಳ ನಾಟಕ ಮಾಲಿಕೆಯಲ್ಲಿ ಮೊದಲ ಬಾರಿಗೆ ಷೇಕ್ಸ್ ಪಿಯರನ ನಾಟಕ ಪ್ರದರ್ಶನಗೊಂಡಿದೆ. ಅಕಾಡಮಿ ತನ್ನ ಇಪ್ಪತೈದನೇ ಪ್ರದರ್ಶನಕ್ಕೆ ಜಗತ್ತಿನ ಮೇರು ನಾಟಕಕಾರನಿಗೆ ಸಲ್ಲಿಸಿದ ಗೌರವ ಇದು. ನಾಟಕಕ್ಕೆ ಬಂದ ಪ್ರೇಕ್ಷಕರಿಗೆ ಲಾಡು ಹಂಚುವುದರ ಮುಖಾಂತರ ಅಕಾಡಮಿ ತನ್ನ ಸಂಭ್ರಮವನ್ನು ರಂಗಪ್ರೇಮಿಗಳಲ್ಲಿ ಹಂಚಿಕೊಂಡದ್ದು ಅರ್ಥಪೂರ್ಣವಾಗಿತ್ತು. ತಿಂಗಳ ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಕಲಾಕ್ಷೇತ್ರವೂ ಭರ್ತಿಯಾಗಿದ್ದು ವಿಶೇಷವಾಗಿತ್ತು.

[ ೨೦೦೪, ಮೇ ೬ ರಂದು ಉದಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ ] 

Tuesday, January 22, 2013

ಧರೆಗಿಳಿದ ಕಿನ್ನರಲೋಕ ”ಋಷ್ಯಮೂಕ’



ಅದೊಂದು ಕಪಿಗಳ ಲೋಕ. ಆ ಲೋಕದಲ್ಲಿ ಪ್ರೀತಿ, ಪ್ರೇಮ, ಅಕ್ಕರೆಯದೇ ರಾಜ್ಯಭಾರ. ಅಲ್ಲಿ ಅಳುವಿಗೆ ಜಾಗವಿಲ್ಲ. ಅಲ್ಲಿಗೆ ಅರಿಷಡ್ವೈರಿಗಳ ಪ್ರವೇಶವಾಗುತ್ತದೆ. ಆ ಮುಗ್ಧಲೋಕ ಮಲೀನವಾಗುತ್ತದೆ.ಮಾತಿನ ಕಲರವ ಅಡಗಿ ಹೋಗುತ್ತದೆ. ಮೌನ ಮನೆ ಮಾಡುತ್ತದೆ. ಮುಂದೆ ಆ ಲೋಕ ನಿಷ್ಕಾಮ ಪ್ರೀತಿಯನ್ನು, ಮಾತಿನ ಸಂಭ್ರಮವನ್ನು ಮರಳಿ ಪಡೆಯುತ್ತದೆಯೇ? ಅದನ್ನು ನೋಡಬೇಕಾದರೆ ವಿಜಯನಗರ ಬಿಂಬದ ಮಕ್ಕಳು ಅಭಿನಯಿಸಿದ್ದ ’ಋಷ್ಯಮೂಕ’ ನಾಟಕವನ್ನು ನೋಡಬೇಕು.

ಋಷ್ಯಮೂಕ ಪರ್ವತದ ಬಗ್ಗೆ ನಮಗೆ ಗೊತ್ತಿದೆ. ಅದು ಮತಂಗ ಮುನಿಯ ತಪೋಭೂಮಿಯಾಗಿತ್ತು ಎಂದು ರಾಮಾಯಣ್ದಲ್ಲಿ ಉಲ್ಲೇಖವಿದೆ. ಅಲ್ಲಿ ಸುಗ್ರೀವ ವಾಸವಾಗಿದ್ದ. ಇದು ಈಗಿನ ಬಳ್ಳಾರಿ ಜಿಲ್ಲೆಯ ಆನೆಗುಂದಿಯ ಸಮೀಪ ತುಂಗಾಭದ್ರೆಯ ಸಮೀಪವಿದೆ. ಇಲ್ಲಿಯೇ ಶ್ರಿರಾಮ ವಾಲಿ-ಸುಗ್ರೀವರನ್ನು ಭೇಟಿ ಮಾಡಿದ್ದು ಎಂಬುದು ಪುರಾಣ ನಂಬಿಕೆ. ಹಾಗೆ ಬಂದ ಶ್ರೀರಾಮ ಇಲ್ಲಿನ ಕಪಿ ಸಮೂಹಕ್ಕೆ ಒಂದು ಅಮೂಲ್ಯ ಮಣಿಯನ್ನು ಕೊಟ್ಟ; ಅದು ಪ್ರೀತಿಯ ಸಂಕೇತ. ಈ ಕಲ್ಪನೆಯ ಕಥಾ ಹಂದರವನ್ನಿಟ್ಟುಕೊಂಡು  ಡಾ. ಕಶ್ಯಪ್ ”ಋಷ್ಯಮೂಕ’ ಎಂಬ ನಾಟಕವನ್ನು ಹೆಣೆದಿದ್ದಾರೆ.
ಕಶ್ಯಪ್ ಈ ನಾಟಕವನ್ನು ಬರೆಯಲು ಕಾರಣವಿತ್ತು;  ವಿಜಯನಗರ ಬಿಂಬ ಪ್ರತಿವರ್ಷ ಮಕ್ಕಳಿಗಾಗಿಯೇ ಆರುತಿಂಗಳ ರಂಗ ತರಬೇತಿ ಶಿಭಿರವನ್ನು ಆಯೋಜಿಸುತ್ತಿದೆ. ತರಬೇತಿಯ ಅಂತ್ಯದಲ್ಲಿ ಮಕ್ಕಳಿಂದಲೇ ಮೇಜರ್ ನಾಟಕವೊಂದನ್ನು ಆಡಿಸುತ್ತಿದೆ. ಈ ಬಾರಿ ತರಬೇತಿ ಪಡೆಯುತ್ತಿದ್ದ ಮಕ್ಕಳ ಸಂಖ್ಯೆ ಎಪ್ಪತ್ತು. ಹಾಗಾಗಿಯೇ ಎಲ್ಲಾ ಮಕ್ಕಳನ್ನು ರಂಗದ ಮೇಲೆ ತರುವ ಉದ್ದೇಶದಿಂದಲೇ ಹುಟ್ಟಿಕೊಂಡದ್ದು ಋಷ್ಯಮೂಖ’ ನಾಟಕ.

ನಾಟ್ಕ ತೆರೆದುಕೊಳ್ಳುವುದೇ
’ ’ಹೆಸರಿಗಷ್ಟೇ ಮೂಕ.. ವಾನರರಲೋಕ;
 ಪ್ರೀತಿ, ಪ್ರೇಮ, ಒಲವು, ಗೆಲುವು ಎಲ್ಲವೂ ಇರುವ ನಾಕ’
ಎಂಬ ಹಾಡನ್ನು ಕಪಿಗಳು ಹಾಡುವುದರ ಮೂಲಕ.  ಎಪ್ಪತ್ತು ಮಕ್ಕಳನ್ನು ಒಂದೂಕಾಲು ಘಂಟೆಗಳ ಕಾಲ ರಂಗದ ಮೇಲೆ ಹಿಡಿದಿಡುವುದು ತುಂಬಾ ಜವಾಬ್ದಾರಿಯನ್ನು ಬೇಡುವ ಮತ್ತು ಕಷ್ಟಕರವಾದ ಕೆಲಸ. ಹಾಗಾಗಿ ಸಂಭಾಷಣೆಯ ಜೊತೆಗೆ ಹಾಡುಗಳ ಮುಖಾಂತರ ಕಥೆ ಹೇಳುವುದು ಎಲ್ಲರೂ ಅನುಸರಿಸುವ ಸಾಮಾನ್ಯ ಟೆಕ್ನಿಕ್. ಸಂಭಾಷಣೆ ಬಿದ್ದಾಗ ಹಾಡುಗಳು ನಾಟಕವನ್ನು ಮೇಲೆತ್ತುತ್ತದೆ. ಆದರೆ ಇಲ್ಲಿ ಸಂಭಾಷಣೆ, ಅಭಿನಯ, ಹಾಡು,ಸಂಗೀತ, ವಸ್ತ್ರ ಮತ್ತು ಬೆಳಕಿನ ವಿನ್ಯಾಸ, ನಾಟಕದ ಆಶಯ ಒಂದಕ್ಕೊಂದು ಹೇಗೆ ಮೇಳೈಸಿಕೊಂಡಿತ್ತೆಂದರೆ ಅದು ಮಕ್ಕಳ ನಾಟಕ ಎಂಬ ಮಿತಿಯನ್ನು ಮೀರಿ ದೊಡ್ಡವರಿಗೆ ಪಾಠದಂತಿತ್ತು.

ಒಂದೂಕಾಲು ಘಂಟೆಯ ಈ ನಾಟಕದಲ್ಲಿ ಒಟ್ಟು ಏಳು ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. ಮಕ್ಕಳು ಕಯ್ಯಲ್ಲಿ ಎರಡು ಕಲ್ಲುಗಳನ್ನು ಹಿಡಿದುಕೊಂಡಂತೆ ಅಭಿನಯಿಸಿ ಬೆಂಕಿಯನ್ನು ಹುಟ್ಟಿಸುವ ’ಕಯ್ಯಲ್ಲಿ ಕಲ್ಲು ಎರಡು,ಎದುರಿಗೆ ಮರದ ಕೊರಡು...ಫಟ್..ಫಟ್...’ ಎನ್ನುವ ಹಾಡು ಮಕ್ಕಳಲ್ಲಿ ತುಂಬಿರುವ ಎನರ್ಜಿಯನ್ನು ಬಿಂಬಿಸುವಂತಿತ್ತು.ಹಾಡುಗಳನ್ನೆಲ್ಲಾ ಕಶ್ಯಪರೇ ರಚಿಸಿದ್ದಾರೆ. ಕಶ್ಯಪ್ ರವರ ಕಲ್ಪನೆಗೆ ನಿರ್ದೇಶಕಿ ಎಸ್.ವಿ.ಸುಷ್ಮ ಜೀವ ತುಂಬಿದ್ದಾರೆ. ಆಕೆ ಸ್ವತಃ ಕೊರಿಯೋಗ್ರಾಪರ್ ಕೂಡಾ ಆಗಿರುವುದು ನಾಟಕದ ಸಲೀಲ ಚಲನೆಗೆ ಸಹಾಯಕವಾಗಿತ್ತು. ಕಪಿಗಳನ್ನು ಶಿಸ್ತಿಗೆ ಒಳಪಡಿಸುವುದು ಕಷ್ಟದ ಕೆಲಸವಲ್ಲವೇ? ಎಂದು ತುಂಟತನದ ಪ್ರಶ್ನೆಯನ್ನು ಆಕೆಯ ಮುಂದಿಟ್ಟರೆ ಆಕೆ ತನ್ನ ಎಂದಿನ ಉತ್ಸಾಹದಲ್ಲಿ ಹೇಳಿದ್ದು ಹೀಗೆ; ಹೌದು ಬ್ಲಾಕಿಂಗ್ ಮಾಡುವುದು, ಸ್ಟೇಜ್ ಬ್ಯಾಲೆನ್ಸ್ ಮಾಡುವುದು..ಇದೆಲ್ಲಾ ನಂಗೆ ಚಾಲೆಂಜಿಂಗ್ ಆಗಿತ್ತು’ ಎಂದು ಹುಬ್ಬು ಹಾರಿಸಿದ್ರು.
Add caption

ಆ ನಾಟ್ಕದ ಗಂಭೀರ ವಸ್ತು ಆ ಪುಟ್ಟ ಮಕ್ಕಳಿಗೆ ಎಷ್ಟು ಅರ್ಥ ಆಯ್ತೋ ಅದು ಗೊತ್ತಿಲ್ಲ. ಆದರೆ ಆ ಚಿಣ್ಣರು ಪ್ರದರ್ಶಿಸಿದ ರಂಗಶಿಸ್ತು, ರಂಗ ಸಮತೋಲನ, ಸ್ಫುಟವಾದ ಡೈಲಾಗ್ ಡೆಲಿವರಿ ದೊಡ್ಡವರನ್ನೂ ನಾಚಿಸುವಂತಿತ್ತು. ನಾಟಕದಲ್ಲಿ ಹಲವು ಪ್ರತಿಮೆಗಳು, ರೂಪಕಗಳು ತುಂಬಿದ್ದವು. ಹಂಸ ಜ್ನಾನವನ್ನು ಪ್ರತಿಬಿಂಬಿಸಿದರೆ, ಮಣಿ ಪ್ರೀತಿಯನ್ನು ಸಂಕೇತಿಸುತ್ತಿತ್ತು. ಅರಿಷಡ್ವೈರಿಗಳು ಮನುಷ್ಯನಲ್ಲಿರುವ ಸ್ವಾರ್ಥ ಲಾಲಸೆಯನ್ನು ಬಿಂಬಿಸುತ್ತಿದ್ದವು.
ನಾಟಕದುದ್ದಕ್ಕೂ ಜಿಜ್ನಾಸೆ ನಡೆಯುತ್ತಿದ್ದುದು ತಮಗೆ ಜ್ನಾನ ಬೇಕೋ? ಪ್ರೀತಿ ಬೇಕೋ ಎಂಬುದರ ಬಗ್ಗೆ..ಕೊನೆಗೆ ಪ್ರೀತಿಗೇ ಗೆಲುವಾಗುತ್ತದೆ.
ಈ ನಾಟಕಕ್ಕೆ ವಸ್ತ್ರವಿನ್ಯಾಸ ಮಾಡಿದವರು; ಶೋಭಾ ವೆಂಕಟೇಶ್, ರಂಗಸಜ್ಜಿಕೆ ಮತ್ತು ಪ್ರಸಾದನ ಮಾಲತೇಶ್ ಬಡಿಗೇರ್; ಬೆಳಕು ಏ.ಕೆ.ಕ್ರುಷ್ಣಯ್ಯ, ಸಂಗೀತ ರಾಜಗುರು ಹೊಸಕೋಟೆ. ಮಕ್ಕಳ ಈ ನಾಟಕವನ್ನು ಕಣ್ತುಂಬಿಸಿಕೊಳ್ಳಲು ಅತಿಥಿಗಳಾಗಿ ಬಂದವರು ಹಿರಿಯ ನಾಟಕಕಾರರೂ, ಬರಹಗಾರರೂ ಆದ ಗೋಪಾಲ ವಾಜಪೇಯಿ, ಶಿಕ್ಷಣ ತಜ್ನರಾದ ಗೀತಾ ರಾಮಾನುಜಂ, ಹಿರಿಯ ರಂಗವಿಮರ್ಶಕಿ ವಿಜಯಮ್ಮ, ಹಾಗೂ ದೂರದ ಧಾರವಾಡದಿಂದ ಆಗಮಿಸಿದ ಬರಹಗಾರ ಹಾಗು ಬಾಲ ವಿಕಾಸ ಅಕಾಡಮಿಯ ರಾಜ್ಯ ಸದಸ್ಯರಾದ ಪ್ರದೀಪ್ ಭೂಸನೂರಮಠ್ ಅವರು.
Add caption

ನಾಟಕ ಕೊನೆಯಾಗುವುದು ಈ ಹಾಡಿನಲ್ಲಿ;
ಪ್ರೀತಿ ,ಪ್ರೇಮ, ಅಕ್ಕರೆ, ಎಣಿಕೆಗೆ ಸಿಗದು ಮಾನ್ಯರೇ..
ಅರ್ಷಡ್ವರ್ಗಕ್ಕೆ ಸೋಲಾಯ್ತು.
ನರವಾನರರಿಗೆಲ್ಲಾ ಗೆಲುವಾಯ್ತು.
ಅಕ್ಕರೆಗಿಲ್ಲಿ ನೆಲೆಯಾಯ್ತು.
ಮಾತು ನಮ್ಮಯ ಪಾಲಾಯ್ತು.
ಋಷ್ಯಮೂಕವೀಗ ನಮ್ಮಯ ನಾಕ..’
ಅರಿಷಡ್ವೈರಿಗಳಿಗೆ ಪಕ್ಕಾಗದ ಪ್ರೀತಿ, ಪ್ರೇಮ, ಅಕ್ಕರೆಗಳೇ ಇರುವ  ಲೋಕವೊಂದನ್ನು”ಋಷ್ಯಮೂಕ’ ನಾಟಕ ಕಟ್ಟಿಕೊಟ್ಟಿದೆ. ಅಂತಹ ಲೋಕವೊಂದು ನಮ್ಮನ್ನೂ ಸೇರಿದಂತೆ ನಮ್ಮ ಮಕ್ಕಳಿಗೆಲ್ಲಾ ಸಿಗುವಂತಾದರೆ ಎಷ್ಟು ಚೆನ್ನ ಅಲ್ಲವೇ?

[ ವಿಜಯವಾಣಿಯ ’ವಿದ್ಯಾರ್ಥಿ ಮಿತ್ರ’ ದಲ್ಲಿ ಪ್ರಕಟವಾದ ಬರಹ ]


Friday, December 7, 2012

ರೂಪರೂಪಗಳನು ದಾಟಿ...

ಕನ್ನಡ ರಂಗಭೂಮಿ ಮತ್ತೆ ಕ್ರಿಯಾಶೀಲವಾಗತೊಡಗಿದೆ. ಅದು ಹೊಸ ಪ್ರಯೋಗಗಳತ್ತ ಮುಖ ಮಾಡಿದೆ.
ಕಳೆದ ವರ್ಷಾಂತ್ಯದಲ್ಲಿ ಪ್ರಸನ್ನ ಷೇಕ್ಸ್ ಪಿಯರನ ’ಹ್ಯಾಮ್ಲೆಟ್’ ನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದರು. ಅಷ್ಟೇ ಯಶಸ್ವಿಯಾಗಿ ರಂಗದ ಮೇಲೆಯೂ ತಂದರು. ಒಬ್ಬ ನಾಟಕಕಾರನೇ ನಿರ್ದೇಶಕನೂ ಆದಾಗ ರಂಗ ಪ್ರಯೋಗದಲ್ಲಿ ಏನೇನು ಅನುಕೂಲತೆಗಳು ಆಗಬಹುದೋ ಅದೆಲ್ಲವೂ ಈ ಪ್ರಯೋಗದಲ್ಲಿ ಆಗಿತ್ತು. ಪ್ರಸನ್ನ ರಂಗಾಯಣ್ದ ನಿರ್ದೇಶಕರಾಗಿದ್ದಾಗ ಕೈಗೆತ್ತಿಕೊಂಡ ನಾಟಕವಿದು. ಮೈಸೂರಿನ ರಂಗಾಯಣ ತಂಡವೇ ಇದನ್ನು ಆಡಿತ್ತು.

ಆದಾದ ನಂತರ ಅಂತಹದೇ ಮಹತ್ವದ ಪ್ರಯೋಗವೊಂದು ಇದೇ ಸೆಪ್ಟಂಬರ್ ತಿಂಗಳ ಆದಿಯಲ್ಲಿ ನಡೆಯಿತು. ಅದು ಶಿವರಾಮ ಕಾರಂತರ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ’ ಮೂಕಜ್ಜಿಯ ಕನಸುಗಳು’ ರಂಗವನ್ನು ಏರಿದ್ದು. ಬೆಂಗಳೂರಿನ ’ಕಲಾಗಂಗೋತ್ರಿ’ ತಂಡ ಇದನ್ನು ಅಭಿನಯಿಸಿತ್ತು. ಡಾ. ಬಿ.ವಿ.ರಾಜಾರಂ ನಿರ್ದೇಶಿಸಿದ ಈ ನಾಟಕವನ್ನು ಎಸ್. ರಾಮಮೂರ್ತಿ ರಂಗ ರೂಪಾಂತರಗೊಳಿಸಿದ್ದರು.

ಇದರ ಬೆನ್ನಲ್ಲೇ ರಾಷ್ಟ್ರಕವಿ ಕುವೆಂಪು ಅವರ ’ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿ, ನಾಟಕವಾಗಿ ರಂಗಾಸಕ್ತರನ್ನು ವಿಸ್ಮಯಗೊಳಿಸಿತ್ತು. ಯಾಕೆಂದರೆ ಸುಮಾರು ಎಂಟುನೂರ ಐವತ್ತು ಪುಟಗಳ ಈ ಬೃಹತ್ ಕಾದಂಬರಿಯನ್ನು ನಾಟಕದಂತಹ ಪ್ರದರ್ಶನ ಕಲೆಯ ಚೌಕಟ್ಟಿಗೊಳಪಡಿಸುವುದು ಕಷ್ಟದ ಕೆಲಸವಾಗಿತ್ತು. ಅದನ್ನು ’ನಟರಂಗ’ ತಂಡದ ಶಶಿಧರ್ ಭಾರಿಘಾಟ್ ಮಾಡಿದ್ದರು. ಮೂಕಜ್ಜಿಯ ಕನಸುಗಳನ್ನು ಯಶಸ್ವಿಯಾಗಿ ರಂಗರೂಪಕ್ಕಿಳಿಸಿದ ಎಸ್. ರಾಮಮೂರ್ತಿಯವರು ಇಲ್ಲಿ ಅಷ್ಟೇನೂ ಯಶಸ್ಸು ಸಾಧಿಸಲಾಗಲಿಲ್ಲ. ನಾಟಕ ಒಂದು ಒಳ್ಳೆಯ ಪ್ರಾಮಾಣಿಕ ಪ್ರಯತ್ನವಾಗಿ ಉಳಿಯಿತು.

ಈ ನಡುವೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾದಂಬರಿಯನ್ನಾಧರಿಸಿದ ’ಇಗೋ ಪಂಜರ ಅಗೋ ಮುಗಿಲು’ ಎಂಬ ನಾಟಕ ಅಗಸ್ಟ್ ೧೪ರ ಮಧ್ಯರಾತ್ರಿ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿದೆ. ಕವಿ ಎಲ್.ಎನ್.ಮುಕುಂದರಾಜ್ ಇದನ್ನು ರಂಗರೂಪಾಂತರಗೊಳಿಸಿದ್ದರು. ಸಿ.ಜಿ.ಕೆ ಇದರ ನಿರ್ದೇಶಕರು. ಅದ್ಧೂರಿ ಪ್ರಚಾರದೊಂದಿಗೆ ಅದ್ಧೂರಿ ಪ್ರಯೋಗ ಕಂಡ ಈ ನಾಟಕ ಅಂತಹ ಮಹತ್ವದ ಯಶಸ್ಸನ್ನೇನೂ ಕಾಣಲಿಲ್ಲ.

ಮೇಲಿನ ಎಲ್ಲಾ ನಾಟಕಗಳು ಒಂದಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡವು. ರಂಗಪ್ರೇಮಿಗಳು ರಂಗಭೂಮಿಯಿಂದ ದೂರ ಸರಿಯುತ್ತಿದ್ದಾರೆ ಎಂಬ ಮಾತುಗಳನ್ನು ಈ ಪ್ರದರ್ಶನಗಳು ಸುಳ್ಳು ಮಾಡಿದವು. ಜನ ದುಡ್ಡು ಕೊಟ್ಟು ಈ ನಾಟಕಗಳನ್ನು ನೋಡಿದರು.

ಈಗ ನಗರದ ಇನ್ನೊಂದು ಪ್ರಮುಖ ತಂಡ ’ಬೆನಕ’-ಬಿ.ವಿ.ಕಾರಂತರು ಇದರ ಬೆನ್ನೆಲುಬಾಗಿದ್ದರು- ಜಯಂತ ಕಾಯ್ಕಿಣಿಯವರ ಕಥೆಗಳನ್ನು ಆಧರಿಸಿದ ಹೊಸ ನಾಟಕ ’ ಆಕಾಶ ಬುಟ್ಟಿ’ಯನ್ನು ಕೈಗೆತ್ತಿಕೊಂಡಿದೆ. ಅಕ್ಟೋಬರ್ ೧೨ ಮತ್ತು ೨೩ರಂದು ಎ.ಡಿ.ಎ ರಂಗಮಂದಿರದಲ್ಲಿ ಇದರ ಪ್ರದರ್ಶನ. [ರವೀಂದ್ರ ಕಲಾಕ್ಷೇತ್ರ ದುರಸ್ತಿಯಲ್ಲಿದೆ] ಸಿ. ಬಸವಲಿಂಗಯ್ಯ ಇದರ ನಿರ್ದೇಶಕರು.

ಹೀಗೆ ನವ್ಯ ಕನ್ನಡ ರಂಗಭೂಮಿ ಜಡತ್ವವನ್ನು ಕೊಡವಿಕೊಂಡು ಹೊಸ ಸಾಧ್ಯತೆಗಳತ್ತ ಮುಖ ಮಾಡುತ್ತಿದೆ. ಕನ್ನಡದಲ್ಲಿ ನಾಟಕಗಳ ಕೊರತೆಯಿದೆ ಎಂಬುದು ಹಳೆಯ ಕೊರಗು. ಇದು ಬಹುಮಟ್ಟಿಗೆ ನಿಜ ಕೂಡಾ. ನಾಟಕ ಬರೆಯುವುದಕ್ಕೆ ಸಾಹಿತಿಯೊಬ್ಬನ ಮನಸ್ಸು ಪಕ್ವಗೊಳ್ಳಬೇಕು. ಪರಿಣತಿ ಬೇಕು ಹಿಂದಿನ ಬರಹಗಾರರಿಗೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಅರಿವಿದ್ದು ತಕ್ಕ ಮಟ್ಟಿಗೆ ಅದರಲ್ಲಿ ಕೃಷಿ ಮಾಡಿ ಕೊನೆಗೆ ನಾಟಕ ಬರೆಯುತ್ತಿದ್ದರು. ನಾಟಕ ಬರೆಯುವುದು ಕಷ್ಟದ ಕೆಲಸ. ಆದರೆ ಈಗ ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಹಾಗೆ ಬಹುತೇಕ ಮಂದಿ ನಾಟಕ ಬರೆಯುವುದು ಬಹಳ ಸುಲಭ ಅಂದುಕೊಂಡಿದ್ದಾರೆ. ಹಾಗಾಗಿ ನಾಟಕದ ಆಳ ಮತ್ತು ಅರ್ಥವಿಸ್ತಾರ ಕಾಣೆಯಾಗತೊಡಗಿದೆ.

ಹಾಗಾಗಿ ಏನೋ ಒಳ್ಳೆಯ ನಾಟಕಗಳನ್ನು ಆಡಬೇಕೆಂದು ಬಯಸುವವರು ಹಳೆ ನಾಟಕಗಳತಲೇ ಮುಖ ಮಾಡಬೇಕಾಗಿದೆ. ಅಥವಾ ಹಳೇ ತಂಡಗಳೇ ಹೊಸ ಕಲಾವಿದರನ್ನು ಹಾಕಿಕೊಂಡು ಪುನರ್ ಪ್ರದರ್ಶನ ಮಾಡುತ್ತವೆ. ನಾಟಕಗಳಿಗೆ ಪ್ರೇಕ್ಷಕರು ಬರದೇ ಇರುವುದಕ್ಕೆ ಇದೂ ಒಂದು ಕಾರಣವಿದ್ದಿರಬಹುದು.

ಆದರೆ ಹಿಂದೆ ಹೇಳಿದ ಕಾದಂಬರಿ ಆಧಾರಿತ ರಂಗಪ್ರಯೋಗಗಳನ್ನು ಜನ ಮುಗಿಬಿದ್ದು ನೋಡಿದರು. ದುಬಾರಿ ಟಿಕೇಟ್ ಇದ್ದರೂ ಪ್ರೇಕ್ಷಕರು ಕಿಕ್ಕಿರಿದಿದ್ದರು. ಕಲಾಕ್ಷೇತ್ರದಲ್ಲಿ ಹೊಸ ಮುಖಗಳು ಕಂಡವು. ತಮ್ಮ ನಾಟಕ ಜನರನ್ನು ತಲುಪಬೇಕೆಂಬ ಇರಾದೆಯುಳ್ಳವರು ಈಗ ಕಾದಂಬರಿ, ಸಣ್ಣಕಥೆಗಳತ್ತ ಮುಖ ಮಾಡಬೇಕಾದ ಪರಿಸ್ಥಿತಿಯನ್ನಂತೂ ಮೇಲಿನ ನಾಟಕಗಳು ಸೃಷ್ಟಿಸಿವೆ.
ರಾಜಧಾನಿಯಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಹಲವು ಅನುಕೂಲತೆಗಳುಂಟು. ರಂಗಭೂಮಿಗೆ ಸಂಬಂಧಪಟ್ಟಂತೆ ಹೆಚ್ಚಿನ ಪ್ರಮಾಣದಲ್ಲಿ ವಿಚಾರಸಂಕಿರಣಗಳು, ಕಮ್ಮಟಗಳು, ಚರ್ಚೆ-ಸಂವಾದಗಳು ಇಲ್ಲಿ ನಡೆಯುತ್ತಿರುತ್ತವೆ. ಇಲ್ಲಿ ಕಲಾಕ್ಷೇತ್ರದಂತಹ ಸುಸಜ್ಜಿತ ರಂಗಮಂದಿರವಿದೆ. ಇಲ್ಲಿ ಪ್ರದರ್ಶನ ಕೊಡಬೇಕೆಂಬುದು ಎಲ್ಲಾ ರಂಗತಂಡಗಳ ಕನಸು. ಆದರೆ ಇದು ಜಿಲ್ಲಾಮಟ್ಟದ ಹಾಗೂ ಗ್ರಾಮಾಂತರ ಮಟ್ಟದ ತಂಡಗಳಿಗೆ ಸುಲಭದಲ್ಲಿ ಈಡೇರುವ ಕನಸಲ್ಲ.

ಆರ್. ನಾಗೇಶ್ ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ’ತಿಂಗಳ ನಾಟಕ’ವೆಂಬ ಮಾಲಿಕೆಯನ್ನು ಪ್ರಾರಂಭಿಸಿದ್ದರು. ಅದರಲ್ಲಿ ರಾಜಧಾನಿಯೇತರ ತಂಡಗಳಿಗೆ ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ನಾಟಕ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿದ್ದರು. ಹಾಗಾಗಿ ಹೊರಗಿನ ಉತ್ತಮ ನಾಟಕಗಳನ್ನು ನೋಡುವ ಅವಕಾಶ ಬೆಂಗಳೂರಿನ ರಂಗಾಸಕ್ತರಿಗೆ ಒದಗಿ ಬಂದಿತ್ತು.

ಬೇರೆ ಬೇರೆ ತಂಡದವರು ಒಂದೇ ನಾಟಕವನ್ನು ಆಡಿದಾಗ ಅದನ್ನು ಅಕ್ಕ-ಪಕ್ಕದಲ್ಲಿಟ್ಟು ತೂಗಿ ನೋಡುವ ಅವಕಾಶವೂ ಸಿಕ್ಕಿತ್ತು. ಕಳೆದ ಮೇ ತಿಂಗಳ ಮಾಲಿಕೆಯಲ್ಲಿ ಮಂಗಳೂರಿನ ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಸ್ತುತಪಡಿಸಿದ ’ಕೋರ್ಟ್ ಮಾರ್ಷಲ್’ ನಾಟಕದ ಮರುದಿನವೇ ಅದೇ ನಾಟಕವನ್ನು ಸಿ.ಆರ್.ಸಿಂಹ ನೇತೃತ್ವದ ವೇದಿಕೆ ತಂಡ ಪ್ರದರ್ಶಿಸಿತ್ತು. ಹಿಂದಿಯಲ್ಲಿ ಸ್ವದೇಶ್ ದೀಪಕ್ ರಚಿಸಿದ ಈ ನಾಟಕವನ್ನು ಕನ್ನಡಕ್ಕೆ ತಂದವರು ಸಿದ್ಧಲಿಂಗ ಪಟ್ಟಣಶೆಟ್ಟಿ.. ಎರಡೂ ತಂಡಗಳು ಪೈಪೋಟಿ ನೀಡುವ ರೀತಿಯಲ್ಲಿ ಅಭಿನಯಿಸಿದ್ದರೂ ಸದಾನಂದ ಸುವರ್ಣರ ನಿರ್ದೇಶನವೇ ಮೇಲುಗೈ ಸಾಧಿಸಿತ್ತು.

ಇದೇ ಮಾಲಿಕೆಯಲ್ಲಿ ಧಾರವಾಡದ ಜಯತೀರ್ಥ ಜೋಷಿಯವರ ’ಜಿ.ಕೆ.ಮಾಸ್ತರರ ಪ್ರಣಯ ಪ್ರಸಂಗ’ವನ್ನು [ ರಚನೆ; ಚಂದ್ರಶೇಖರ ಕಂಬಾರ ] ಬೆಂಗಳೂರಿನ ಪ್ರೇಕ್ಷಕರು ನೋಡಿದರು. ಸಮಸ್ತ ನವ್ಯ ಸಾಹಿತ್ಯದ ಸಾರ ಸಂಗ್ರಹದಂತಿರುವ ’ ಭೂಮಿಗೀತ’ ವನ್ನು [ಗೋಪಾಲಕೃಷ್ಣ ಅಡಿಗರ ಸುಪ್ರಸಿದ್ಧ ಕವನ] ರಂಗಕ್ಕೆ ತಂದ ಉತ್ಸಾಹಿ ರಂಗಕರ್ಮಿ ಅವರು. ರಾಜಧಾನಿಯ ರಂಗ ಚಟುವಟಿಕೆಗಳಿಗೆ ಸಮಬಲವಾಗಿ ಉತ್ತರ ಕರ್ನಾಟಕದ ರಂಗಭೂಮಿಯನ್ನು ಕ್ರಿಯಾಶೀಲಗೊಳಿಸಿದವರು ಜೋಷಿ. ಕಳೆದ ವರ್ಷ ನವೆಂಬರ್ ೧೬ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ’ ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗ ನೋಡುತ್ತಿರುವಾಗಲೇ ಅವರು ಹೃದಯಾಘಾತದಿಂದ ತೀರಿಕೊಂಡ ಸುದ್ದಿ ಕಲಾಕ್ಷೇತ್ರಕ್ಕೆ ಬಂದು ಒಂದು ಕ್ಷಣ ಪ್ರೇಕ್ಷಕರ ಎದೆಯೂ ಮ್ಲಾನಗೊಂಡಿತ್ತು.

ಇದೇ ಮಾಲಿಕೆಯಲ್ಲಿ ಧಾರವಾಡದ ಅರುಣೋದಯದ ಹವ್ಯಾಸಿ ಕಲಾಸಂಘದಿಂದ ಕಂಬಾರರ ’ಮಹಾಮಾಯಿ’, ಶಿವಮೊಗ್ಗಾದ ಮೀಡಿಯಾ ತಂಡದವರು ಅಭಿನಯಿಸಿದ ಬಿ.ಚಂದ್ರಗೌಡರ ’ಕಡಿದಾಳ ಶಾಮಣ್ಣ’ ನಾಟಕ ಪ್ರದರ್ಶಿಸಲ್ಪಟ್ಟಿತ್ತು. ಎಲ್ಲಾ ನಾಟಕಗಳ ನೆನಪು ಬಾರದಿದ್ದರೂ ರಾಜಧಾನಿಯಲ್ಲಿ ಕುಳಿತ ನಮಗೆ ಹೆಗ್ಗೋಡಿನ ನೀನಾಸಂ ತಿರುಗಾಟ ಮತ್ತು ಮೈಸೂರಿನ ರಂಗಾಯಣದ ಹೊರತಾಗಿತೂ ಹೊರಗಿನ ಗ್ರಾಮೀಣ ಮಟ್ಟದ ಕೆಲವು ನಾಟಕಗಳನ್ನು ನೋಡುವ ಅವಕಾಶ ಸಿಕ್ಕಿತ್ತು.

ತಿಂಗಳ ಮಾಲಿಕೆಯಿಂದ ಆದ ಇನ್ನೊಂದು ಉಪಯೋಗವೆಂದರೆ ಒಂದೆರಡು ಒಳ್ಳೆಯ ವೃತ್ತಿ ನಾಟಕಗಳನ್ನು ನೋಡಲು ಸಾಧ್ಯವಾಗಿದ್ದು.ಪೆಭ್ರವರಿಯಲ್ಲಿ ಧಾರವಾಡದ ಕಲಬುರ್ಗಿ ಶರಣಬಸವೇಶ್ವರ ಕೃಪಾಪೋಷಿತ ನಾಟ್ಯಸಂಘದಿಂದ ’ಬಸ್ ಕಂಡಕ್ಟರ್’ ಮತ್ತು ಇಳಕಲ್ಲಿನ ಹವ್ಯಾಸಿ ರಂಗತಂಡ ಸ್ನೇಹ ರಂಗದಿಂದ ಪಿ.ಬಿ. ಧುತ್ತರಗಿಯವರ ’ಸಂಪತ್ತಿಗೆ ಸವಾಲ್’ ನಾಟಕಗಳು ಪ್ರದರ್ಶನಗೊಂಡವು.

ರವೀಂದ್ರ ಕಲಾಕ್ಷೇತ್ರದಲ್ಲಿ ಹವ್ಯಾಸಿ ನಾಟಕಗಳೇ. ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ. ಇಲ್ಲಿಗೆ ಬರುವ ಪ್ರೇಕ್ಷಕರಿಗೆ ವೃತ್ತಿ ರಂಗಭೂಮಿಯ ನಾಟಕಗಳನ್ನು ನೋಡಿ ಆನಂದಿಸುವ ಮನಸ್ಥಿತಿ ಸಾಮಾನ್ಯವಾಗಿ ಇರುವುದಿಲ್ಲ. ಆದರೂ ಅಂಥವರೂ ಈ ನಾಟಕಗಳನ್ನು ನೋಡಿ ಖುಷಿ ಪಟ್ಟರು.

ಇತ್ತೀಚೆಗೆ ಬೆಂಗಳೂರಿನಲ್ಲಿ ಹಾಸ್ಯ ನಾಟಕಗಳು, ಹಾಸ್ಯೋತ್ಸವಗಳು ಜನರನ್ನು ತಮ್ಮೆಡೆಗೆ ಸೆಳೆಯುತ್ತಲಿವೆ. ಹುಬ್ಬಳ್ಳಿಯ ಗುರು ಸಂಸ್ಥೆ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ನಡುವೆ ಸೇತುವೆಯಾಗಿ ತನ್ನ ನಾಟಗಳನ್ನು ಪ್ರದರ್ಶಿಸುತ್ತಿದೆ. ಅವರ ’ಆಲ್ ದಿ ಬೆಸ್ಟ್’ ಮತ್ತು ’ಸಹಿ ರಿ ಸಹಿ’ ಈಗಾಗಲೇ ನೂರಾರು ಪ್ರದರ್ಶನಗಳನ್ನು ಕಂಡಿದೆ.

ಇಷ್ಟೆಲ್ಲಾ ರಂಗಚಟುವಟಿಕೆಗಳು ನಡೆದರೂ ಕಲಾಕ್ಷೇತ್ರ ತುಂಬುವುದು ಅಪರೂಪ. ಬೆಂಗಳೂರಿನಲ್ಲೇ ಕನಿಷ್ಟ ೧೫೦ ರಂಗತಂಡಗಳಿವೆ. ಒಂದು ರಂಗತಂಡ ನಾಟಕ ಪ್ರದರ್ಶನ ನೀಡುತ್ತಲಿದ್ದರೆ ಇನ್ನೊಂದು ತಂಡದವ್ರು ಅಲ್ಲೇ ಕಲಾಕ್ಷೇತ್ರದ ಮೆಟ್ಟಲುಗಳ ಮೇಲೆ ಹರಟೆ ಹೊಡೆಯುತ್ತಾ ಕುತಿರುತ್ತಾರೆಯೇ ಹೊರತು ಕುತೂಹಲಕ್ಕಾದರೂ ರಂಗಮಂದಿರದ ಒಳಗೆ ಇಣುಕಿ ನೋಡುವುದಿಲ್ಲ.
ಮಕ್ಕಳ ರಂಗಭೂಮಿ ಕೂಡಾ ಬೆಂಗಳೂರಿನಲ್ಲಿ ಸಾಕಷ್ಟು ಕ್ರಿಯಾಶೀಲವಾಗಿದೆ. ಆದರೆ ನಮ್ಮ ಗಮನಕ್ಕೆ ಬಂದಂತೆ ಗ್ರಾಮಾಂತರ ಮಟ್ಟದಲ್ಲಿ ಮಕ್ಕಳ ರಂಗಭೂಮಿ ಇನ್ನೂ ಹೆಚ್ಚು ಕ್ರಿಯಾಶೀಲವಾಗಿದೆ.

ರಂಗಭೂಮಿಯಂತಹ ಸಶಕ್ತ ಮಾಧ್ಯಮವನ್ನು ಇತ್ತೀಚೆಗಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮ ಕಡೆಗಣಿಸಿದೆಯೇನೋ ಎಂದು ಭಾಸವಾಗುತ್ತಿದೆ. ಕನ್ನಡದ ನಿಯತಕಾಲಿಕಗಳು, ಸಾಹಿತ್ಯ ಪತ್ರಿಕೆಗಳು ರಂಗಭೂಮಿಯ ಬಗ್ಗೆ ಗಂಭೀರವಾಗಿ ಬರೆಯುವುದನ್ನೇ ನಿಲ್ಲಿಸಿಬಿಟ್ಟಿವೆ. ರಂಗಭೂಮಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವವರು, ಆಳವಾದ ಜ್ನಾನ ಹೊಂದಿರುವವರುಪತ್ರಿಕೆಗಳಿಗೆ ಬರೆಯುತ್ತಿಲ್ಲ. ಮಹತ್ವದ ಪ್ರಯೋಗಗಳಾದಾಗ ಅದನ್ನು ರಾಜ್ಯಮಟ್ಟದ ಸುದ್ದಿಯಾಗಿಸುವುದು ಮುಖ್ಯ. ಆದರೆ ರಾಜಧಾನಿಯಿಂದ ಹೊರಡುವ ಪತ್ರಿಕೆಗಳು ಅದನ್ನು ಕೇವಲ ತಮ್ಮ ಪುಲ್ ಔಟ್ ಗಳಿಗೇ ಸೀಮಿತಗೊಳಿಸುತ್ತವೆ.

ಇನ್ನು ಗ್ರಾಮೀಣ ರಂಗಭೂಮಿಯಲ್ಲಿನ ಚಟುವಟಿಗಳು ಪ್ರಾದೇಶಿಕ ಪುಲ್ ಔಟ್ ಗಳಿಗಷ್ಟೇ ಸೀಮಿತವಾಗಿದೆ. ಹಾಗಾಗಿ ರಾಜಧಾನಿ ಮತ್ತು ಗ್ರಾಮೀಣ ಪ್ರದೇಶದ ರಂಗ ಚಟುವಟಿಕೆಗಳ ಮಧ್ಯೆ ಒಂದು ರೀತಿಯ ಶೂನ್ಯ ಆವರಿಸಿದೆ. ಹಿಂದೆಲ್ಲಾ ಇದನ್ನು ತುಂಬುವ ಕೆಲಸವನ್ನು ಪತ್ರಿಕೆಗಳು, ವಿಮರ್ಶಕರು ಮಾಡುತ್ತಿದ್ದರು. ಇಂದು ಬರುತ್ತಿರುವ ಅನೇಕ ವಿಮರ್ಶೆಗಳು ಬರೀ ಕಥೆ ಹೇಳುವುದಕ್ಕೆ ಇಲ್ಲವೇ ಲಾಬಿ ಮಾಡುವುದಕ್ಕಷ್ಟೇ ಸೀಮಿತವಾಗಿದೆ.

ಹಾಗಾಗಿಯೇ ಏನೋ ರಂಗಭೂಮಿಯನ್ನು ಗಂಭೀರವಾಗಿ ತೆಗೆದುಕೊಂಡವರು ತಮ್ಮಷ್ಟಕ್ಕೇ ತಾವೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರಚಾರದ ಯಾವ ಹಂಗೂ ಬೇಕಾಗಿಲ್ಲ. ಆದರೆ ರಾಜಧಾನಿಯಲ್ಲಿರುವವರು ಪ್ರಚಾರದ ಹಂಗಿಲ್ಲದೆ ಒಂದು ಹುಲ್ಲು ಕಡ್ಡಿಯನ್ನೂ ಎತ್ತಿಡಲಾರರು.

[ ೨೦೦೪ ರಲ್ಲಿ ’ ಹಂಗಾಮ’ ನಿಯತಕಾಲಿಕಕ್ಕಾಗಿ ಬರೆದ ಲೇಖನ]

Sunday, December 2, 2012

ವಿಶ್ವಾಮಿತ್ರನ ’ದೃಷ್ಟಿ’ಯಲ್ಲಿ ಹುಟ್ಟಿಕೊಂಡ ಪ್ರಶ್ನೆಗಳು...

ನಮ್ಮ ಪುರಾಣದ ಮುನಿಶ್ರೇಷ್ಟರಲ್ಲಿ ವಿಶ್ವಾಮಿತ್ರನಂಥ ರೆಬೆಲ್ ಮುನಿ ಇನ್ನೊಬ್ಬನಿಲ್ಲ. ಆತನದು ವರ್ಣರಂಜಿತ ವ್ಯಕ್ತಿತ್ವ. ಹುಟ್ಟಿದ್ದು ಕ್ಷತ್ರಿಯ ಕುಲದಲ್ಲಿ; ಆದರೆ ಆಸೆ ಪಟ್ಟಿದ್ದು ಬ್ರಹ್ಮರ್ಷಿ ಪದವಿಗೆ. ಅತನ ದೃಷ್ಟಿ ಹೊರಳಿದೆಡೆಯಲೆಲ್ಲ ಏನಾದರೊಂದು ಅದ್ಭುತ ಘಟಿಸುತ್ತಿತ್ತು.

ವಶಿಷ್ಟನ ಆಶ್ರಮದಲ್ಲಿ ಕಾಮಧೇನುವನ್ನು ಕಂಡ. ಅದಕ್ಕಾಗಿ ಆಸೆಪಟ್ಟ. ಸಿಗಲಿಲ್ಲ. ತಪಸ್ಸಿಗೆ ಕೂತ. ಯಾವ್ಯಾವುದಕ್ಕೋ ಆಸೆಪಡುತ್ತಲೇ ಹೋದ....ಮೇನಕೆಯನ್ನು ಸೇರಿ ಶಕುಂತಲೆಯನ್ನು ಪಡೆದ. ಹಸಿವೆಯನ್ನು ತಾಳಲಾರದೆ ಚಂಡಾಲ ಗೃಹ ಹೊಖ್ಖು ನಾಯಿ ಮಾಂಸ ತಿಂದ.

ಚೌಕಟ್ಟುಗಳನ್ನು ಮೀರುತ್ತಲೇ ಹೋದ. ತ್ರಿಶಂಕುವಿಗಾಗಿ ಪ್ರತಿ ಸ್ವರ್ಗವನ್ನೇ ಸೃಷ್ಟಿಸಿದ. ಇಲ್ಲೊಂದು ಐರನಿ ಇದೆ.
ಸೂರ್ಯವಂಶದ ಕುಲಗುರು ವಶಿಷ್ಠ. ಆತ ತನ್ನ ರಾಜನಾದ ತ್ರಿಶಂಕುವನ್ನು ಸಶರೀರನಾಗಿ ಸ್ವರ್ಗಕ್ಕೆ ಕಳುಹಿಸಲು ನಿರಾಕರಿಸುತ್ತಾನೆ. ಆಗ ತ್ರಿಶಂಕು ಮೊರೆ ಹೊಕ್ಕಿದ್ದು ವಶಿಷ್ಠನ ಎದುರಾಳಿಯಾದ ವಿಶ್ವಾಮಿತ್ರನನ್ನು. ಅದೇ ತ್ರಿಶಂಕುವಿನ ಮಗನಾದ ಹರಿಶ್ಚಂದ್ರನ ಮಗ ರೋಹಿತನಿಗೆ ವರುಣನ ಶಾಪದಿಂದಾಗಿ ಜಲೋದರ ರೋಗ ಆವರಿಸಿದಾಗ ಅದಕ್ಕೆ ಶಮನದ ಹಾದಿಯನ್ನು ವಶಿಷ್ಠ ತೋರಿಸುವುದಿಲ್ಲ. ಆಗ ರಕ್ಷಣೆಗೆ ಬಂದಿದ್ದು ಇದೇ ವಿಶ್ವಾಮಿತ್ರ.

ತನಗೆ ಪುತ್ರ ಸಂತಾನವಾದರೆ ಆ ಮಗುವನ್ನು ನಿನಗೆ ಕೊಡುತ್ತೇನೆ ಎಂದು ಹರಕೆ ಹೊತ್ತ ಫಲವಾಗಿ ಹರಿಶ್ಚಂದ್ರನಿಗೆ ಲೋಹಿತಾಶ್ವ ಜನಿಸುತ್ತಾನೆ. ಆದರೆ ಮಗನ ಮೇಲಿನ ಮೋಹದಿಂದಾಗಿ ಮಾತಿಗೆ ತಪ್ಪುತ್ತಾನೆ.  ಜಲೋದರ ರೋಗ ಆವರಿಸುತ್ತದೆ. ಆಗ ಅಜಿತಗರ್ಭನ [ಆತನ ಇನ್ನೊಂದು ಹೆಸರು ರುಚಿಕ] ಮಧ್ಯಮ ಪುತ್ರನಾದ ಶ್ಯುನಶೇಫನನ್ನು ಖರೀದಿಸಿ ತಂದು ವರುಣನಿಗೆ ಬಲಿ ಕೊಡುವ ಪ್ರಯತ್ನ ನಡೆಯುತ್ತದೆ. ಇದು ಎಷ್ಟ್ರರ ಮಟ್ಟಿಗೆ ಸರಿ? ಯಜ್ನಹೋತೃ ವಿಶ್ವಾಮಿತ್ರ ಮತ್ತು ಅವರ ಮಕ್ಕಳ ಅಭಿಪ್ರಾಯ ಬೇಧ ಏನು? ವರುಣನ ಕೃಪೆಯಿಂದ ಬದುಕುಳಿದವನು ಯಾರಿಗೆ ಸೇರಿದವನು? ಅವನ ಗೋತ್ರ ಯಾವುದು? ವಿಶ್ವಾಮಿತ್ರ ಆತನನ್ನು ತನ್ನ ಮಗನಾಗಿ ಅಂಗೀಕರಿಸಿದಾಗ ಉಂಟಾದ ಧರ್ಮದ ತೊಡಕುಗಳಾವುವು?...ಮುಂತಾದ ಪ್ರಶ್ನೆಗಳಿಗೆಲ್ಲಾ ಉತ್ತರಿಸುವ ಪ್ರಯತ್ನ ಮಾಡುವ ನಾಟಕವೇ ’ದೃಷ್ಟಿ’

ಬೈಂದೂರಿನ ಲಾವಣ್ಯ ರಂಗತಂಡದವರು ವೇಣುಗೋಪಾಲ ಕಾಸರಗೋಡು ಅವರ ಈ ನಾಟಕವನ್ನು ಯಶಸ್ವಿಯಾಗಿ ರಂಗದ ಮೇಲೆ ತಂದರು. ನಾಟಕ ಅಕಾಡಮಿಯ ಹಿಂದಿನ ಅಧ್ಯಕ್ಷರಾದ ಆರ್. ನಾಗೇಶ್ ಅವರು ಮೂರು ವರ್ಷಗಳ ಹಿಂದೆ ’ತಿಂಗಳ ನಾಟಕ’ವೆಂಬ ಮಾಲಿಕೆಯನ್ನು ಆರಂಭಿಸಿದ್ದರು. ಹೊರಊರುಗಳಿಂದ ರಾಜಧಾನಿಗೆ ಬಂದ ರಂಗತಂಡಗಳು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದರು. ಇದೊಂದು ವಿಶಿಷ್ಟ ಪ್ರಯೋಗ. ’ದೃಷ್ಟಿ ಕೂಡಾ ತಿಂಗಳ ನಾಟಕ ಮಾಲಿಕೆಯಲ್ಲಿ ಪ್ರದರ್ಶಿತವಾಗುತ್ತದೆ ಎಂದು ಪ್ರಚುರಪಡಿಸಲಾಗಿತ್ತು. ಆದರೆ ಅದು ತಿಂಗಳ ನಾಟಕ ಮಾಲಿಕೆಯ ಮುಂದುವರಿಕೆಯೇ ಎಂಬುದು ಸ್ಪಷ್ಟವಾಗಲಿಲ್ಲ.

ಒಂದೂಕಾಲು ಘಂಟೆ ಅವಧಿಯಲ್ಲಿ ಈ ನಾಟಕದಲ್ಲಿ ಏಕ ಸೂತ್ರವಿತ್ತು. ಭಾಷಾಗಾಂಭೀರ್ಯವಿತ್ತು. ನಾಟಕದ ವಸ್ತು ಕೂಡಾ ತಾರ್ಕಿಕ ಸಂಭಾಷಣೆಯನ್ನೇ ಬೇಡುತ್ತಿತ್ತು. ಸಂಭಾಷಣೆಯಲ್ಲಿ ಇನ್ನೂ ಆಳ, ಮೊನಚು,ತರ್ಕ ಇದ್ದಿದ್ದರೆ ಉಸಿರು ಬಿಗಿ ಹಿಡಿದು ನೋಡಬಹುದಿತ್ತು.
ಸೀತಾರಾಮ ಶೆಟ್ಟಿ ಕೊರಾಡಿಯವರ ರಂಗವಿನ್ಯಾಸ, ಮತ್ತು ಬೆಳಕಿನಡಿ ವಿಶ್ವಾಮಿತ್ರದ ’ದೃಷ್ಟಿ’ಗೆ ಶ್ಯುನೇಶೇಫನ ತಂದೆ-ತಾಯಿಯರ ಸಂಭಾಷಣೆ ದೃಷ್ಟಿಬೊಟ್ಟಿನಂತೆ ಇತ್ತು. ಇಲ್ಲಿ ನಾಟಕ ಮುಗ್ಗರಿಸಿತು. ಶುನಸ್ಯೇಫ ಯಾರಿಗೆ ಸೇರಿದವನು ಎಂಬ ಧರ್ಮ ಜಿಜ್ನಾಸೆಯ ಸಭೆಯಲ್ಲಿ ಮುನಿಗಳನ್ನು ಎತ್ತರದಲ್ಲು ಕುಳ್ಳಿರಿಸಿ, ಅದಕ್ಕೆ ಬೆಳಕಿನ ವಿನ್ಯಾಸವನ್ನು ಮಾಡಿದ ರೀತಿ ಅದ್ಭುತವೆನಿಸಿತ್ತು. ಆದರೆ ನಾಟಕದುದ್ದಕ್ಕೂ ಬೆಳಕಿನ ವಿನ್ಯಾಸ ಪರಿಣಾಮಕಾರಿಯಾಗಿರಲಿಲ್ಲ. ಸ್ಪಾಟ್ ಲೈಟ್ ಬಳಸಿದ್ದರೆ ಪಾತ್ರಗಳ ವ್ಯಕ್ತಿತ್ವ ಹೆಚ್ಚು ಸ್ಫುಟಗೊಳ್ಳುತ್ತಿತ್ತೇನೋ!.

ನಾಟಕದ ಆರಂಭ ಮತ್ತು ಮುಂದುವರಿಕೆಗೆ ಋಷಿಗಳ ಮೇಳವನ್ನು ಉಪಯೋಗಿಸಿಕೊಂಡದ್ದು ಔಚಿತ್ಯಪೂರ್ಣವಾಗಿತ್ತು. ವಿಶ್ವಾಮಿತ್ರನಂಥ ವಿಶ್ವಾಮಿತ್ರನನ್ನೇ  ವಿರೋಧಿಸುವ ಮಗನಾಗಿ ಆಂದ್ರಕನ ಪಾತ್ರದಲ್ಲಿ ಬಿ. ಮೋಹನ ಕಾರಂತ್ ಗಮನ ಸೆಳೆದರು. ಶ್ಯುನಶೇಫನ ಅಭಿನಯ ಸಹಾ ಉಲ್ಲೇಖನೀಯ.

[ ೨೦೦೬ರಲ್ಲಿ ಉದಯವಾಣಿಯಲ್ಲಿ ಪ್ರಕಟವಾದ ಲೇಖನ ]

Saturday, November 24, 2012

ಮುರಳಿಯ ಮೋಹನ ಗಾನವದೆಲ್ಲಿ?

ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಗೀತ ನಾಟಕಗಳ ಪ್ರಯೋಗ ಆಗಿದ್ದು ಕಡಿಮೆ. ಅದರ ಪ್ರಯೋಗಕ್ಕೆ ಬೇಕಾದ ಅಗತ್ಯಗಳು ಬೇರೆಯೇ ತೆರನಾಗಿರುವುದು ಅದಕ್ಕೆ ಕಾರಣ.
ಗೀತ ನಾಟಕವೆಂದರೆ ಗೀತೆಗಳಿಂದಲೇ ಕ್ರಿಯೆಯು ನಡೆಯುವ ನಾಟಕ. ಇಲ್ಲಿ ನಾಟಕೀಯ ಘಟನೆಗಳಿಗಿಂತ ಸಾಹಿತ್ಯ, ಕಾವ್ಯ ಮತ್ತು ಸಂಗೀತವೇ ಪ್ರಧಾನ ಪಾತ್ರ ವಹಿಸುತ್ತವೆ. ಹಾಗೂ ಇದರಲ್ಲಿ ಅಭಿನಯದ ಜತೆಗೆ ಸಂಗೀತ ಜ್ನಾನವೂ ಕಲಾವಿದರಿಗೆ ಅತ್ಯಗತ್ಯ. ಸ್ವಲ್ಪಮಟ್ಟಿನ ನೃತ್ಯದ ಅರಿವು ಕೂಡಾ. ನಿರ್ದೇಶಕನಿಗೆ ಇದೆಲ್ಲೆದರ ಮೇಳೈಸುವಿಕೆ ಸಾಧ್ಯವಾದರೆ ಆ ಪ್ರಯೋಗ ಯಶಸ್ವಿಯಾಗುತ್ತದೆ..
ತೆಲುಗು, ತಮಿಳು, ಬಂಗಾಲಿ ಭಾಷೆಗಳಲ್ಲಿ.ಗೀತ ನಾಟಕಗಳು ಇದ್ದರೂ ಕನ್ನಡದಲ್ಲಿ ಇವುಗಳ ಸಂಖ್ಯೆ ಜಾಸ್ತಿ. ಒಂದು ರೀತಿಯಲ್ಲಿ ಭಾರತೀಯ ಸಾಹಿತ್ಯ ಪರಂಪರೆಗೆ ಗೀತ ನಾಟಕಗಳು ಕನ್ನಡದ ವಿಶಿಷ್ಟ ಕೊಡುಗೆ ಎನ್ನಬಹುದು. ಪು.ತಿ.ನ ಎರಡೇ ಗೀತ ನಾಟಕಗಳನ್ನು ಬರೆದರೂ ಈ ಪ್ರಕಾರದಲ್ಲಿ ಅವರ ಹೆಸರು  ದೊಡ್ಡದು. ಮೇಲು ಕೋಟೆಯ ಈ ಕವಿ ಕೃಷ್ಣನ ಅನನ್ಯ ಭಕ್ತ. ಭಕ್ತಿ ಪರಂಪರೆಯ ಮುಂದುವರಿಕೆಯ ಭಾಗ ಇವರ ಕಾವ್ಯ ಸೃಷ್ಟಿ.
’ಗೋಕುಲ ನಿರ್ಗಮನ’ ೧೯೪೯ರಲ್ಲಿ ಪು.ತಿ.ನ ಬರೆದ ಎರಡನೆಯ ಗೀತ ನಾಟಕ. ’ಅಹಲ್ಯೆ’ ೧೯೪೧ ರಲ್ಲಿ ಪ್ರಕಟವಾಗಿತ್ತು.
ಬಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾರಂತರದ್ದು ದೊಡ್ಡ ಹೆಸರು. ಅವರ ನಾಟಕಗಳಲ್ಲಿ ಸಂಗೀತವೇ ವಿಜೃಂಭಿಸುತ್ತದೆ. ಅದರಲ್ಲೂ ಜಾನಪದ ವಾದ್ಯ ಸಂಗೀತ ಮತ್ತು ಜಾನಪದ ಮಟ್ಟುಗಳು ಯಾವಾಗಲೂ ಮುನ್ನೆಲೆಯಲ್ಲಿ ಇರುತ್ತವೆ. ಹೊಸ ಹೊಸ ಪ್ರಯೋಗಗಳಿಗೆ ಅವರು ಸದಾ ಮುಂದಾಗುತ್ತಾರೆ. ಇಂತಹ ಕಾರಂತರು  ಪು.ತಿ,ನ. ರವರ ’ಗೋಕುಲ ನಿರ್ಗಮನ’ವನ್ನು ನೀನಾಸಂ ತಿರುಗಾಟಕ್ಕಾಗಿ ಹತ್ತು ವರುಷಗಳ ಹಿಂದೆ ನಿರ್ದೇಶಿಸಿದ್ದರು. ಆಗ ಅದು ಯಶಸ್ವಿಯಾಗಿ ನೂರೈವತ್ತಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡಿತ್ತು.
ಇದೇ ಕಾರಂತರು ಹುಟ್ಟು ಹಾಕಿದ್ದ ’ ಬೆನಕ’ ನಾಟಕ ತಂಡ ಈಗ ’ಗೋಕುಲ ನಿರ್ಗಮನ’ವನ್ನು ಮತ್ತೆ ರಂಗದ ಮೇಲೆ ತಂದಿದೆ. ಇದರ ನಿರ್ದೇಶಕರು ಟಿ.ಎಸ್.ನಾಗಾಭರಣ. ಈಗ ಸಿನೇಮಾ ಮತ್ತು ಕಿರುತೆರೆಯೆಡೆ ತಮ್ಮ ಗಮನವನ್ನು ಬಹು ಮಟ್ಟಿಗೆ ಕೇಂದ್ರೀಕರಿಸಿರುವ ನಾಗಾಭರಣ ಒಂದು ಕಾಲದಲ್ಲಿ ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ ಹೆಸರು ಮಾಡಿದವರು.
ಹಲವಾರು ಪುನರ್ ಪ್ರದರ್ಶನಗಳನ್ನು ಕಂಡ ನಾಟಕವೊಂದನ್ನು ಇನ್ನೊಬ್ಬ ನಿರ್ದೇಶಕ ಕೈಗೆತ್ತಿಕೊಂಡಾಗ ಆತನ ಮುಂದಿರುವ ಸವಾಲು ಮತ್ತು ಜವಾಬ್ದಾರಿ ಹೆಚ್ಚು. ಅಲ್ಲಿ ಆತ ತನ್ನ ಸೃಜನಶೀಲತೆಯನ್ನು ತೋರಬೇಕಾಗುವುದು ಅನಿರ್ವಾಯ. ಈ ದೃಷ್ಟಿಯಿಂದ ನೋಡಿದರೆ ಹಳೆಯ ಪಾತ್ರಧಾರಿಗಳ ಬದಲು ಹೊಸ ನಟ-ನಟಿಯರು ಕಾಣಿಸಿಕೊಂಡಿದ್ದಾರೆ ಅಷ್ಟೇ. ಕಾರಂತರ ಪ್ರಯೋಗದ ಯಥಾವತ್ ಕಾಪಿ ಇದು. ನಾಗಾಭರಣರ ಉದ್ದೇಶ ಅದೇ ಇದ್ದಿರಬಹುದೇನೋ ಗೊತ್ತಿಲ್ಲ.

ತಮಗೆ ಒಪ್ಪಿಸಿದ ಕೆಲಸವನ್ನು ಈ ಪಾತ್ರಧಾರಿಗಳು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಶ್ರೀಕೃಷ್ಣ ಪಾತ್ರಧಾರಿ ಮೈಕೋ ಮಂಜುನಾಥ್ ತುಂಟ ಕೃಷ್ಣನಾಗಿ, ಮುರಳಿಲೋಲನಾಗಿ ಪಾತ್ರಕ್ಕೆ ಶಕ್ತಿ ಮೀರಿ ಜೀವ ತುಂಬಿದ್ದಾರೆ. ಆದರೆ ಅವರಿಗೆ ಸರಿ ಜೋಡಿಯಾಗಿ ಪಾತ್ರ ನಿರ್ವಹಿಸಲು ರಾಧೆಯಾಗಿ ಅಭಿನಯಿಸಿದ ವಿದ್ಯಾವೆಂಕಟರಾಂಗೆ ಸಾಧ್ಯವಾಗಿಲ್ಲ. ರಾಧೆಯದು ಅರ್ಪಣಾ ಭಾವ. ಅದಕ್ಕೆ ಮುಗ್ಧ ಮುಖಭಾವದ ನಟಿ ಬೇಕು.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಗೋಕುಲ ನಿರ್ಗಮನದಲ್ಲಿ ನಟಿಸಿದ ಹೆಚ್ಚಿನ ಎಲ್ಲಾ ನಟ-ನಟಿಯರು ಕಿರುತೆರೆಯಲ್ಲಿ ತೊಡಗಿಸಿಕೊಂಡವರು. ಅದವರಿಗೆ ಬದುಕಿನ ಹಾದಿ. ಹಾಗಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಅವರ ಪಾತ್ರಗಳು ಸೂಪರ್ ಇಂಪೋಸ್ ಆಗುತ್ತಿದ್ದವು. ಮುಕ್ತವಾಗಿ ನೋಡುವುದು ಕಷ್ಟವಾಗುತ್ತಿತ್ತು.

ಬಲರಾಮನಾಗಿ ಪೂರ್ಣಚಂದ್ರ ತೇಜಸ್ವಿ, ಅಕ್ರೂರನಾಗಿ ಟಿ.ಎನ್.ಗಿರೀಶ್ ಕಿರುತೆರೆಯ ಹ್ಯಾಂಗೋವರ್ ನಿಂದ ಸಂಪೂರ್ಣವಾಗಿ ಬಿಡಿಸಿಕೊಂಡಂತಿತ್ತು. ಅಲ್ಲಲ್ಲಿ ಚದುರಿ ಹೋಗಿದ್ದ ಈ ನಟ-ನಟಿಯರನ್ನು ಬೆನಕ ಮತ್ತೆ ರಂಗಭೂಮಿಗೆ ಎಳೆದು ತಂದಿದೆ. ಈ ಎಳೆಯ ಕಲಾವಿದರು ಅಲ್ಲಿ-ಇಲ್ಲಿ ಎರಡೂ ಕಡೆಯೂ ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಬೆನಕದ ಕಿರಿಯ ತಲೆಮಾರು ಹಿರಿಯರ ಯಶಸ್ವಿ ನಾಟಕಗಳನ್ನು ಮತ್ತೆ ರಂಗದ ಮೇಲೆ ಪ್ರದರ್ಶಿಸುವ ತಯಾರಿಯಲ್ಲಿದೆ. ಇದು ಒಂದು ರೀತಿಯಲ್ಲಿ ಸ್ವಾಗತಾರ್ಹವೇ ಆದರೂ ಹಿರಿಯರ ನೆರಳಿನಿಂದ ಈಚೆ ಬರುವ ಪ್ರಯತ್ನ ಒಳ್ಳೆಯದು. ಮುಂದಿನ ದಿನಗಳಲ್ಲಿ ಹಯವದನ, ಸಂಗ್ಯಾಬಾಳ್ಯ, ಜೋಕುಮಾರಸ್ವಾಮಿ ಪ್ರದರ್ಶನ ಕಾಣಲಿವೆ. ಹಿಂದಿನ ನಾಟಕಗಳಿಗೆ ಅವರು ಕಾಯಕಲ್ಪ ಮಾಡದಿದ್ದರೆ ಏನನ್ನೂ ಸಾಧಿಸಿದಂತಾಗುವುದಿಲ್ಲ. ಒಂದು ಕೃತಿ ಕಾಲದ ನಿಕಷಕ್ಕೆ ಸಿಕ್ಕಿ ಹೊಳಪುಗೊಳ್ಳುತ್ತಲೇ ಇರಬೇಕು. ಮೊದಲ ಬಾರಿಗೆ ಗೋಕುಲ ನಿರ್ಗಮನವನ್ನು ಹೊಳಪುಗೊಳಿಸಿದವರು ಬಿ.ವಿ.ಕಾರಂತರು. ಅದರ ಸಾರ ಸರ್ವಸ್ವವನ್ನೆಲ್ಲಾ ಹೀರಿ ಅದನ್ನು ರಂಗದ ಮೇಲಿನ ದೃಶ್ಯಕಾವ್ಯವಾಗಿಸಿದರು. ಜನರ ಹತ್ತಿರ ತಂದರು. ಜನರು ಪು.ತಿ.ನರನ್ನು, ಅವರ ಬರವಣಿಗೆಯನ್ನು ಮುಖ್ಯವಾಗಿ ಗೋಕುಲ ನಿರ್ಗಮನವನ್ನು ಮತ್ತೊಮ್ಮೆ ಪುಟ ತಿರುಗಿಸಿ ನೋಡುವಂತಾಯ್ತು.

ಗೋಕುಲ ನಿರ್ಗಮನವನ್ನು ಈಗ ನೀನಾಸಂನವರು ಆಡುತ್ತಿಲ್ಲ. ಆದರೆ ತಮ್ಮ ಶೋ ಅನ್ನು ಅವರು ವಿಡಿಯೋ ಚಿತ್ರೀಕರಣ ಮಾಡಿ ಕಾಯ್ದಿರಿಸಿಕೊಂಡಿದ್ದಾರೆ. ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅದನ್ನು ವ್ಯಾಖ್ಯಾನ, ವಿಮರ್ಶೆಗಳೊಂದಿಗೆ ಪ್ರದರ್ಶಿಸಲಾಯ್ತು. ಅಲ್ಲಿಯ ಶಿಬಿರಾರ್ಥಿಗಳು ಅದನ್ನು ಮಂತ್ರಮುಗ್ಧರಾಗಿ ವೀಕ್ಷಿಸಿದರು. ಭಾವುಕರಾಗಿ ಅದರ ಚರ್ಚೆಯಲ್ಲಿ ಪಾಲ್ಗೊಂಡರು.

ಒಂದು ರಂಗಪ್ರಯೋಗದ ಫಲಶ್ರುತಿಯ ಬಗ್ಗೆ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಅಭಿಪ್ರಾಯಗಳಿರಬಹುದು. ಆದರೆ ಗೋಕುಲ ನಿರ್ಗಮನದ  ಪ್ರದರ್ಶನ ನೀಡುವ ಅನುಭವ ಅಲೌಕಿಕವಾದುದು. ಅದು ನಮ್ಮ ಭಾವಲೋಕದ ಮೃದು ಮಧುರವಾದ ಭಾವನೆಗಳನ್ನು ಮೀಟುವುದರ ಜೊತೆಗೆ ಯಾವುದೋ ಅಲೌಕಿಕವಾದುದರ ಕಡೆಗೂ ನಮ್ಮ ಲಕ್ಷ್ಯವನ್ನು ಸೆಳೆಯುತ್ತದೆ. ಗೀತ ನಾಟಕಗಳ ಯಶಸ್ಸು ಇರುವುದೇ ಇಲ್ಲಿ. ವಾಸ್ತವದಿಂದ ದೂರ ಸರಿದಷ್ಟು ಭಾವಲೋಕ ಶ್ರೀಮಂತಗೊಳ್ಳುತ್ತದೆ.

ಗೋಕುಲ ನಿರ್ಗಮನಕ್ಕೆ ಇನ್ನೊಮ್ಮೆ ಸಾಣೆ ಹಿಡಿಯುವ ಸಂದರ್ಭ ನಾಗಾಭರಣರಿಗೆ ಒದಗಿ ಬಂದಿತ್ತು. ಆದರೆ ಅವರು ಅದರೆಡೆಗೆ ಗಮನ ಹರಿಸಲಿಲ್ಲ. ಅಂದು ಸ್ವಾತಂತ್ರ್ಯ ಪೂರ್ವದಲ್ಲಿ ಪು.ತಿ.ನರವರು ಗೊಲ್ಲತಿಯ ಭಾವ ತಳೆದು ಗೋಕುಲ ನಿರ್ಗಮನವನ್ನು ಬರೆದಂತೆ ಇಂದು ಈ ಕಾಲಘಟ್ಟದಲ್ಲಿ ನಿಂತು ಆ ಗೋಕುಲದ ಪಾತ್ರಗಳ ಪರಕಾಯ ಪ್ರವೇಶ ಮಾಡಿ ಅವರ ಮನಸ್ಸು ಬಗೆದಿದ್ದರೆ ಹೊಸ ವ್ಯಾಖ್ಯಾನಗಳು ದೊರೆಯುತ್ತಿದ್ದವೇನೋ..!

ಕಳೆದ ವರ್ಷ ಸುರೇಶ್ ಅನಗಳ್ಳಿಯವರು ಮೇಘದೂತವನ್ನು ಎಡಪಂಥೀಯ ದೃಷ್ಟಿಕೋನದಿಂದ ನೋಡಿ ರಂಗದ ಮೇಲೆ ತಂದಿದ್ದರು. ಒಬ್ಬ ವ್ಯಕ್ತಿಯ ಭಾವಲೋಕದ ವಿವರಗಳಿಗೆ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಸಾಧ್ಯವಾಗುವುದಾದರೆ ಗೋಕುಲ ನಿರ್ಗಮನದಂತಹ ಹಲವು ಆಯಾಮದ ಕೃತಿಗೆ ಯಾಕೆ ಸಾಧ್ಯವಾಗಲಾರದು?

ಕನ್ನಡದ ಪ್ರಸಿದ್ಧ ವಿಮರ್ಶಕರಾಗಿದ್ದ ಡಾ.ಡಿ.ಆರ್ ನಾಗರಾಜ್ ರವರು ಗೋಕುಲ ನಿರ್ಗಮನದಲ್ಲಿ ಧರ್ಮ-ಕಾಮದ ಸಂಘರ್ಷವನ್ನು ಕಂಡಿದ್ದಾರೆ. ಕೊಳಲನ್ನು ಜೀವ ಕಾಮದ ಸಂಕೇತವಾಗಿ ನೋಡಿದ್ದಾರೆ. ಇನ್ನು ಕೆಲವರು ಗ್ರಾಮ ಸಂಸ್ಕೃತಿ ಮತ್ತು ನಗರ ಸಂಸ್ಕೃತಿಯ ಸಂಘರ್ಷವನ್ನು ಇಲ್ಲಿ ಕಂಡಿದ್ದಾರೆ. ಕಿ.ರಂ. ನಾಗರಾಜ್ ರವರು ಗೋಕುಲದ ಪರಿಸರದಲ್ಲಿ ತಾಯ್ತನ, ಹೆಣ್ತನದ ಭಾವವನ್ನು ಕಂಡಿದ್ದಾರೆ. ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ ಹೆಣ್ಣು ಜೀವವೊಂದಕ್ಕೆ ಈ ಕೃತಿ ಪ್ರಕೃತಿ-ಪುರುಷರ ನಡುವಿನ ನಿರಂತರ ಆಕರ್ಷಣೆ ಮತ್ತುವಿಯೋಗದ ಸ್ಥಾಯೀ ಭಾವವಾಗಿ ಕಾಣುತ್ತದೆ. ರಾಧೆ ಆ ನಿರಂತರ ಪ್ರೇಮದ ಮೂರ್ತ ರೂಪ. ಅದು ಅಲೌಕಿಕವಾದುದು. ಆಕೆಯಲ್ಲಿರುವ ಅರ್ಪಣಾ ಭಾವಕ್ಕೆ ಲೌಕಿಕದ ಯಾವ ಕಟ್ಟುಪಾಡುಗಳೂ ಇಲ್ಲ. ಈ ಬಾವದಲ್ಲಿ ಆಕೆಯ ಸಖಿಯರೂ ಪಾಲ್ಗೊಳ್ಳುತ್ತಾರೆ. ಗೋಪಾಲಕರೂ ಸೇರಿದಂತೆ ಇಡೀ ನಂದಗೋಕುಲ ಭಾಗಿಯಾಗುತ್ತದೆ; ಸಾಮೂಹಿಕ ಅರ್ಪಣಾ ಭಾವ.

ಎಲ್ಲವನ್ನೂ ಸ್ವೀಕರಿಸಿ ತನ್ನಲ್ಲಿ ಕಾಪಿಡುವ ಪ್ರಕೃತಿ. ಒಂದು ಹಂತದವರೆಗೆ ಮಾತ್ರ ಆಕೆಯಲ್ಲಿ ಜೀವಶಕ್ತಿ ತುಂಬಿ ನಂತರ ನಿರ್ಗಮಿಸುವ ಪುರುಷ, ಇಂದಿಗೂ ಆಧುನಿಕ ಸ್ತ್ರೀಯರನ್ನು ಕಾಡುವ ನಿಗೂಢ. ಸಂಸಾರದಲ್ಲಿ ಇದ್ದುಕೊಂಡೇ ಅದರಿಂದ ಬಿಡುಗಡೆಗಾಗಿ ಹಂಬಲಿಸುವ ಆಕೆಗೆ ಮುರಳಿಗಾನ ಬದುಕನ್ನು ಮುನ್ನಡೆಸುವ ಶಕ್ತಿ.

ಇಷ್ಟೆಲ್ಲಾ ಸಾಧ್ಯತೆಗಳು, ಆಳ-ವಿಸ್ತಾರಗಳನ್ನೊಳಗೊಂಡ ಕೃತಿಯನ್ನು ಒಂದು ರಮ್ಯಕಥನವಾಗಿಸಿ ದೃಶ್ಯಕಾವ್ಯವಾಗಿಸಿದ್ದಾರೆ ಬಿ.ವಿ.ಕಾರಂತರು. ನಾಗಾಭರಣ ಇದರಲ್ಲಿರುವ ಧ್ವನಿಶಕ್ತಿಯನ್ನು ಗುರುತಿಸಿ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಮಾಡಬಹುದಿತ್ತು. ಆದರೆ ಅದು ಒಂದು ’ಸಿಂಡ್ರೆಲ್ಲಾ’ ಶೋದ ಮಟ್ಟಕಷ್ಟೇ ಸೀಮಿತಗೊಂಡಿದೆ.

[’ಹಂಗಾಮ’ ನಿಯತಕಾಲಿಕದ ೨೦೦೪ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನ ]


ರಂಗಸ್ಥಳದಲ್ಲಿ ನಾನು ನೋಡಿದ್ದು...

ನಾನು ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ನಾಟಕ ಬರೆಯುವ ಪ್ರಯತ್ನ ಮಾಡಿದ್ದೇನೆ.
ಕೆಲವು ಪತ್ರಿಕೆ, ನಿಯತಕಾಲಿಕಗಳಿಗಾಗಿ ನಾಟಕ ವಿಮರ್ಶೆಗಳನ್ನು ಬರೆದಿದ್ದೇನೆ. ಹಾಗೆ ಬರೆದ ವಿಮರ್ಶೆಗಳು ಎಲ್ಲೆಲ್ಲಿಯೋ ಚದುರಿ ಹೋಗಿವೆ. ಕೆಲವು ರಂಗಮಿತ್ರರು ಅದನ್ನೆಲ್ಲಾ ಒಟ್ಟುಸೇರಿಸಿ ನೀವ್ಯಾಕೆ ಒಂದು ಪುಸ್ತಕ ಹೊರತರಬಾರದು ಎಂದು ಹಲವಾರು ಬಾರಿ ಕೇಳಿದ್ದಾರೆ. ಆ ಬರಹಗಳು ಅಷ್ಟು ಮೌಲಿಕವಾದುವು ಎಂದು ನನಗನ್ನಿಸಿಲ್ಲ. ಇತ್ತೀಚೆಗೆ ಹಳೆ ಪುಸ್ತಕಗಳನ್ನು ರದ್ದಿಗೆ ಹಾಕುವಾಗ ಅಕಸ್ಮತ್ತಾಗಿ ಕೆಲವು ಪೇಪರ್ ಕಟ್ಟಿಂಗ್ಸ್ ದೊರಕಿದವು. ಇವುಗಳಿಗಾಗಿ ಬ್ಲಾಗ್ ಒಂದನ್ನು ಯಾಕೆ ರಚಿಸಬಾರದು ಅನ್ನಿಸಿದಾಗ ಹುಟ್ಟಿಕೊಂಡದ್ದೇ ’ರಂಗಸ್ಥಳ’

ರಂಗಸ್ಥಳದಲ್ಲಿ ನಾಟಕ, ಸಿನೇಮಾ, ಯಕ್ಷಗಾನ ಮತ್ತು ಭೂತಾರಾಧನೆಯಂತಹ ದೃಶ್ಯ ಮತ್ತು ಆರಾಧನಾ ರಂಗಭೂಮಿಗೆ ಸಂಬಂಧಪಟ್ಟಂತ ಬರಹಗಳನ್ನು ಪೋಸ್ಟ್ ಮಾಡುವ ಇರಾದೆಯಿದೆ. ಜೊತೆಗೆ ನನ್ನ ಇನ್ನೊಂದು ಬ್ಲಾಗ್’”ಮೌನಕಣಿವೆ’ www.mounakanive.blogspot.com ನಲ್ಲಿರುವ ನಾಟಕಕ್ಕೆ ಸಂಬಂಧಪಟ್ಟ ಬರಹಗಳನ್ನು ಇಲ್ಲಿಗೆ ಸ್ಥಳಾಂತರಿಸುತ್ತೇನೆ.

ಎಂದಿನಂತೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ನನಗಿರುತ್ತದೆಯೆಂದು ನಂಬಿದ್ದೇನೆ.