Total Pageviews

Sunday, December 2, 2012

ವಿಶ್ವಾಮಿತ್ರನ ’ದೃಷ್ಟಿ’ಯಲ್ಲಿ ಹುಟ್ಟಿಕೊಂಡ ಪ್ರಶ್ನೆಗಳು...

ನಮ್ಮ ಪುರಾಣದ ಮುನಿಶ್ರೇಷ್ಟರಲ್ಲಿ ವಿಶ್ವಾಮಿತ್ರನಂಥ ರೆಬೆಲ್ ಮುನಿ ಇನ್ನೊಬ್ಬನಿಲ್ಲ. ಆತನದು ವರ್ಣರಂಜಿತ ವ್ಯಕ್ತಿತ್ವ. ಹುಟ್ಟಿದ್ದು ಕ್ಷತ್ರಿಯ ಕುಲದಲ್ಲಿ; ಆದರೆ ಆಸೆ ಪಟ್ಟಿದ್ದು ಬ್ರಹ್ಮರ್ಷಿ ಪದವಿಗೆ. ಅತನ ದೃಷ್ಟಿ ಹೊರಳಿದೆಡೆಯಲೆಲ್ಲ ಏನಾದರೊಂದು ಅದ್ಭುತ ಘಟಿಸುತ್ತಿತ್ತು.

ವಶಿಷ್ಟನ ಆಶ್ರಮದಲ್ಲಿ ಕಾಮಧೇನುವನ್ನು ಕಂಡ. ಅದಕ್ಕಾಗಿ ಆಸೆಪಟ್ಟ. ಸಿಗಲಿಲ್ಲ. ತಪಸ್ಸಿಗೆ ಕೂತ. ಯಾವ್ಯಾವುದಕ್ಕೋ ಆಸೆಪಡುತ್ತಲೇ ಹೋದ....ಮೇನಕೆಯನ್ನು ಸೇರಿ ಶಕುಂತಲೆಯನ್ನು ಪಡೆದ. ಹಸಿವೆಯನ್ನು ತಾಳಲಾರದೆ ಚಂಡಾಲ ಗೃಹ ಹೊಖ್ಖು ನಾಯಿ ಮಾಂಸ ತಿಂದ.

ಚೌಕಟ್ಟುಗಳನ್ನು ಮೀರುತ್ತಲೇ ಹೋದ. ತ್ರಿಶಂಕುವಿಗಾಗಿ ಪ್ರತಿ ಸ್ವರ್ಗವನ್ನೇ ಸೃಷ್ಟಿಸಿದ. ಇಲ್ಲೊಂದು ಐರನಿ ಇದೆ.
ಸೂರ್ಯವಂಶದ ಕುಲಗುರು ವಶಿಷ್ಠ. ಆತ ತನ್ನ ರಾಜನಾದ ತ್ರಿಶಂಕುವನ್ನು ಸಶರೀರನಾಗಿ ಸ್ವರ್ಗಕ್ಕೆ ಕಳುಹಿಸಲು ನಿರಾಕರಿಸುತ್ತಾನೆ. ಆಗ ತ್ರಿಶಂಕು ಮೊರೆ ಹೊಕ್ಕಿದ್ದು ವಶಿಷ್ಠನ ಎದುರಾಳಿಯಾದ ವಿಶ್ವಾಮಿತ್ರನನ್ನು. ಅದೇ ತ್ರಿಶಂಕುವಿನ ಮಗನಾದ ಹರಿಶ್ಚಂದ್ರನ ಮಗ ರೋಹಿತನಿಗೆ ವರುಣನ ಶಾಪದಿಂದಾಗಿ ಜಲೋದರ ರೋಗ ಆವರಿಸಿದಾಗ ಅದಕ್ಕೆ ಶಮನದ ಹಾದಿಯನ್ನು ವಶಿಷ್ಠ ತೋರಿಸುವುದಿಲ್ಲ. ಆಗ ರಕ್ಷಣೆಗೆ ಬಂದಿದ್ದು ಇದೇ ವಿಶ್ವಾಮಿತ್ರ.

ತನಗೆ ಪುತ್ರ ಸಂತಾನವಾದರೆ ಆ ಮಗುವನ್ನು ನಿನಗೆ ಕೊಡುತ್ತೇನೆ ಎಂದು ಹರಕೆ ಹೊತ್ತ ಫಲವಾಗಿ ಹರಿಶ್ಚಂದ್ರನಿಗೆ ಲೋಹಿತಾಶ್ವ ಜನಿಸುತ್ತಾನೆ. ಆದರೆ ಮಗನ ಮೇಲಿನ ಮೋಹದಿಂದಾಗಿ ಮಾತಿಗೆ ತಪ್ಪುತ್ತಾನೆ.  ಜಲೋದರ ರೋಗ ಆವರಿಸುತ್ತದೆ. ಆಗ ಅಜಿತಗರ್ಭನ [ಆತನ ಇನ್ನೊಂದು ಹೆಸರು ರುಚಿಕ] ಮಧ್ಯಮ ಪುತ್ರನಾದ ಶ್ಯುನಶೇಫನನ್ನು ಖರೀದಿಸಿ ತಂದು ವರುಣನಿಗೆ ಬಲಿ ಕೊಡುವ ಪ್ರಯತ್ನ ನಡೆಯುತ್ತದೆ. ಇದು ಎಷ್ಟ್ರರ ಮಟ್ಟಿಗೆ ಸರಿ? ಯಜ್ನಹೋತೃ ವಿಶ್ವಾಮಿತ್ರ ಮತ್ತು ಅವರ ಮಕ್ಕಳ ಅಭಿಪ್ರಾಯ ಬೇಧ ಏನು? ವರುಣನ ಕೃಪೆಯಿಂದ ಬದುಕುಳಿದವನು ಯಾರಿಗೆ ಸೇರಿದವನು? ಅವನ ಗೋತ್ರ ಯಾವುದು? ವಿಶ್ವಾಮಿತ್ರ ಆತನನ್ನು ತನ್ನ ಮಗನಾಗಿ ಅಂಗೀಕರಿಸಿದಾಗ ಉಂಟಾದ ಧರ್ಮದ ತೊಡಕುಗಳಾವುವು?...ಮುಂತಾದ ಪ್ರಶ್ನೆಗಳಿಗೆಲ್ಲಾ ಉತ್ತರಿಸುವ ಪ್ರಯತ್ನ ಮಾಡುವ ನಾಟಕವೇ ’ದೃಷ್ಟಿ’

ಬೈಂದೂರಿನ ಲಾವಣ್ಯ ರಂಗತಂಡದವರು ವೇಣುಗೋಪಾಲ ಕಾಸರಗೋಡು ಅವರ ಈ ನಾಟಕವನ್ನು ಯಶಸ್ವಿಯಾಗಿ ರಂಗದ ಮೇಲೆ ತಂದರು. ನಾಟಕ ಅಕಾಡಮಿಯ ಹಿಂದಿನ ಅಧ್ಯಕ್ಷರಾದ ಆರ್. ನಾಗೇಶ್ ಅವರು ಮೂರು ವರ್ಷಗಳ ಹಿಂದೆ ’ತಿಂಗಳ ನಾಟಕ’ವೆಂಬ ಮಾಲಿಕೆಯನ್ನು ಆರಂಭಿಸಿದ್ದರು. ಹೊರಊರುಗಳಿಂದ ರಾಜಧಾನಿಗೆ ಬಂದ ರಂಗತಂಡಗಳು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಿದ್ದರು. ಇದೊಂದು ವಿಶಿಷ್ಟ ಪ್ರಯೋಗ. ’ದೃಷ್ಟಿ ಕೂಡಾ ತಿಂಗಳ ನಾಟಕ ಮಾಲಿಕೆಯಲ್ಲಿ ಪ್ರದರ್ಶಿತವಾಗುತ್ತದೆ ಎಂದು ಪ್ರಚುರಪಡಿಸಲಾಗಿತ್ತು. ಆದರೆ ಅದು ತಿಂಗಳ ನಾಟಕ ಮಾಲಿಕೆಯ ಮುಂದುವರಿಕೆಯೇ ಎಂಬುದು ಸ್ಪಷ್ಟವಾಗಲಿಲ್ಲ.

ಒಂದೂಕಾಲು ಘಂಟೆ ಅವಧಿಯಲ್ಲಿ ಈ ನಾಟಕದಲ್ಲಿ ಏಕ ಸೂತ್ರವಿತ್ತು. ಭಾಷಾಗಾಂಭೀರ್ಯವಿತ್ತು. ನಾಟಕದ ವಸ್ತು ಕೂಡಾ ತಾರ್ಕಿಕ ಸಂಭಾಷಣೆಯನ್ನೇ ಬೇಡುತ್ತಿತ್ತು. ಸಂಭಾಷಣೆಯಲ್ಲಿ ಇನ್ನೂ ಆಳ, ಮೊನಚು,ತರ್ಕ ಇದ್ದಿದ್ದರೆ ಉಸಿರು ಬಿಗಿ ಹಿಡಿದು ನೋಡಬಹುದಿತ್ತು.
ಸೀತಾರಾಮ ಶೆಟ್ಟಿ ಕೊರಾಡಿಯವರ ರಂಗವಿನ್ಯಾಸ, ಮತ್ತು ಬೆಳಕಿನಡಿ ವಿಶ್ವಾಮಿತ್ರದ ’ದೃಷ್ಟಿ’ಗೆ ಶ್ಯುನೇಶೇಫನ ತಂದೆ-ತಾಯಿಯರ ಸಂಭಾಷಣೆ ದೃಷ್ಟಿಬೊಟ್ಟಿನಂತೆ ಇತ್ತು. ಇಲ್ಲಿ ನಾಟಕ ಮುಗ್ಗರಿಸಿತು. ಶುನಸ್ಯೇಫ ಯಾರಿಗೆ ಸೇರಿದವನು ಎಂಬ ಧರ್ಮ ಜಿಜ್ನಾಸೆಯ ಸಭೆಯಲ್ಲಿ ಮುನಿಗಳನ್ನು ಎತ್ತರದಲ್ಲು ಕುಳ್ಳಿರಿಸಿ, ಅದಕ್ಕೆ ಬೆಳಕಿನ ವಿನ್ಯಾಸವನ್ನು ಮಾಡಿದ ರೀತಿ ಅದ್ಭುತವೆನಿಸಿತ್ತು. ಆದರೆ ನಾಟಕದುದ್ದಕ್ಕೂ ಬೆಳಕಿನ ವಿನ್ಯಾಸ ಪರಿಣಾಮಕಾರಿಯಾಗಿರಲಿಲ್ಲ. ಸ್ಪಾಟ್ ಲೈಟ್ ಬಳಸಿದ್ದರೆ ಪಾತ್ರಗಳ ವ್ಯಕ್ತಿತ್ವ ಹೆಚ್ಚು ಸ್ಫುಟಗೊಳ್ಳುತ್ತಿತ್ತೇನೋ!.

ನಾಟಕದ ಆರಂಭ ಮತ್ತು ಮುಂದುವರಿಕೆಗೆ ಋಷಿಗಳ ಮೇಳವನ್ನು ಉಪಯೋಗಿಸಿಕೊಂಡದ್ದು ಔಚಿತ್ಯಪೂರ್ಣವಾಗಿತ್ತು. ವಿಶ್ವಾಮಿತ್ರನಂಥ ವಿಶ್ವಾಮಿತ್ರನನ್ನೇ  ವಿರೋಧಿಸುವ ಮಗನಾಗಿ ಆಂದ್ರಕನ ಪಾತ್ರದಲ್ಲಿ ಬಿ. ಮೋಹನ ಕಾರಂತ್ ಗಮನ ಸೆಳೆದರು. ಶ್ಯುನಶೇಫನ ಅಭಿನಯ ಸಹಾ ಉಲ್ಲೇಖನೀಯ.

[ ೨೦೦೬ರಲ್ಲಿ ಉದಯವಾಣಿಯಲ್ಲಿ ಪ್ರಕಟವಾದ ಲೇಖನ ]

2 comments:

  1. ಮೊದಲಿಗೆ ಇಂತಹ ವಿಚಾರ ಆಧರಿತ ಬ್ಲಾಗ್ ಆರಂಭಿಸಿದ ನಿಮಗೆ ಅಭಿನಂದನೆಗಳು.

    ಒಳ್ಳೆಯ ನಾಟಕವನ್ನು ಕಳೆ ಕಟ್ಟಿದ ಬೈಂದೂರಿನ ಲಾವಣ್ಯ ರಂಗತಂಡದವರಿಗೂ, ರಚನೆಕಾರರಾದ ವೇಣುಗೋಪಾಲ ಕಾಸರಗೋಡು ಅವರಿಗೂ ಅಭಿನಂದನೆಗಳು.

    ReplyDelete
  2. ಅಂದ ಹಾಗೆ, ಈ ವಿಮರ್ಶೆಯನ್ನು ಓದಿ ನನಗೆ ಮೂರು ದಶಕಗಳ ಹಿಂದೆಯೇ ನಾಟಕಕಾರ ಮಿತ್ರ ನಿಸರ್ಗಪ್ರಿಯ ರಚಿಸಿದ 'ಶುನಶ್ಯೇಪ' ಎಂಬ ಹೆಸರಿನ ಒಂದು ನಾಟಕ ನೆನಪಿಗೆ ಬಂತು... ೧೯೮೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ನಾಟಕ ಹಸ್ತಪ್ರತಿ ಸ್ಪರ್ಧೆಯಲ್ಲಿ ಈ ನಾಟಕಕ್ಕೆ ಮೊದಲ ಬಹುಮಾನ ಬಂದಿತ್ತು. ನಾನು ದ್ವಿತೀಯನಾಗಿದ್ದೆ.

    ReplyDelete