Total Pageviews

Wednesday, July 20, 2016

ರಂಗಭೂಮಿಯಲ್ಲಿ ಕಾವ್ಯಾನುಭೂತಿ.
ಕಾವ್ಯ , ವಿಮರ್ಶೆ ಮತ್ತು ಅಭಿನಯ ಇವು ಮೂರು ಬಿನ್ನ ಭಿನ್ನ ಕ್ಷೇತ್ರಗಳಾದರೂ ಒಟ್ಟು ಪರಿಣಾಮವನ್ನು ಬೀರುವ ದೃಷ್ಟಿಯಲ್ಲಿ ಇವುಗಳಲ್ಲಿ ಸಮಾನವಾದ ಅಂಶಗಳಿವೆ. ಈ ಮೂರೂ ಕ್ಷೇತ್ರಗಳನ್ನು ಒಟ್ಟಾಗಿ ಬೆಸೆದು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನವೊಂದು ಜನವರಿ ಒಂಬತ್ತರಂದು ಬೆಂಗಳೂರಿನ ನಯನ  ರಂಗಮಂದಿರದಲ್ಲಿ ನಡೆಯಿತು.

ರಂಗಭೂಮಿಯಲ್ಲಿ ಬಹುದೊಡ್ಡ ಹೆಸರಾದ ಪ್ರಸನ್ನ ಅವರು ನಿರ್ಧೇಶಿಸಿ, ರಂಗಾಯಣ ತಂಡ ಅಭಿನಯಿಸಿದ ’ ಕಾವ್ಯ ಸಂಚಯ’ ರಂಗಭೂಮಿಯ ಹೊಸ ಪ್ರಯೋಗವೊಂದಕ್ಕೆ ಮುನ್ನುಡಿ ಬರೆಯಿತು.

ರಂಗಾಯಣವು ’ಕಾವ್ಯ ಸಂಚಯ’ದ ಕುರಿತಾಗಿ ತನ್ನ ಕರಪತ್ರದಲ್ಲಿ ಹೀಗೆ ಹೇಳಿಕೊಂಡಿದೆ್;
” ಕನ್ನಡದಲ್ಲಿ ಕಾವ್ಯ ಓದುವ ಪರಂಪರೆಯೇ ನಶಿಸಿ ಹೋಗುತ್ತಿದೆ. ಗಮಕ ಹಳೇ ಕಾವ್ಯಕ್ಕಾಯಿತು. ಕವಿಗಳೇ ಧೀರ ಗಂಭೀರವಾಗಿ ಪದ್ಯವನ್ನು ಓದುವುದು ನವೋದಯಕ್ಕಾಯಿತು.ಈಗ ಕಾವ್ಯವೆಂಬುದು ಸಂಪೂರ್ಣ ಮೂಕವಾಗಿ ಬರಿದೇ ಓದುವ ಕಾವ್ಯವಾಗಿ ಕುಳಿತಿದೆ. ಶಬ್ದವೆಂಬ ಕನ್ನಡ ಪದಕ್ಕೆ ಎರಡು ಅರ್ಥವಿತ್ತು. ಅದು ಶಬ್ದವೂ ಹೌದು, ಪದವೂ ಹೌದು. ಈಗ ಶಬ್ದ ರಹಿತ ನಿಶ್ಯಬ್ದ ಪದ ಮಾತ್ರವಾಗುತ್ತಿದೆ. ಬೇಂದ್ರೆಯವರ ನಂತರ ತನ್ನದೇ ಕವಿತೆಯನ್ನು ಆಕರ್ಷಕವಾಗಿ ಪ್ರೇಕ್ಷಕರೆದುರು ಮಂಡಿಸಬಲ್ಲ ಕವಿಗಳೇ ವಿರಳವಾಗುತ್ತಿದ್ದಾರೆ, ಇವು ಕನ್ನಡ ಸ್ಥಿತಿಯಲ್ಲಿ ಮಾತ್ರವೇ ಅಲ್ಲ.
ಆದರೆ ಕೆಲವು ಭಾರತೀಯ ಭಾಷೆಗಳಲ್ಲಿ ಇದಕ್ಕೊಂದು ಪರಿಹಾರ ಹುಡುಕುವ ಪ್ರಯತ್ನ ನಡೆಯುತ್ತಿದೆ. ಬಂಗಾಲಿಯಲ್ಲಿ ನಟರು ಕವಿತಾವಾಚನ ಮಾಡುವ ಜನಪ್ರಿಯ ಶೈಲಿಯೊಂದು ಜಾರಿಯಲ್ಲಿದೆ ರಂಗಾಯಣದ ಕಾವ್ಯ ಸಂಚಯ ಅಂತಹದ್ದೊಂದು ಹೊಸ ಪ್ರಯತ್ನ.”

ಕಾರ್ಯಕ್ರಮದ ಆರಂಭವೇ ಹೊಸ ರೀತಿಯದಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಅವರು ವೀಣೆ ಮೀಟಿ, ಎರಡು ನಿಮಿಷ ನುಡಿಸಿ ಕಾವ್ಯ ಸಂಚಯಕ್ಕೆ ಚಾಲನೆ ನೀಡಿದರು. ನಂತರ ವೀಣಾ ವಾದಕಿ ವೀಣಾ ವಾರುಣಿಯವರು ’ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ’ ಗೀತೆಯೊಂದಿಗೆ ಕನ್ನಡದ ಸುಪ್ರಸಿದ್ಧ ಕವಿಗಳ ಎರಡ್ಮೂರು ಕವನಗಳನ್ನು ವೀಣೆಯಲ್ಲಿ ನುಡಿಸಿದರು.

ಜಾಗಟೆ ಶಬ್ದದ ಹಿನ್ನೆಲೆಯಲ್ಲಿ ಕತ್ತಲು ತುಂಬಿದ ವೇದಿಕೆಗೆ ಭಾರತೀಯ ಸಂಪ್ರದಾಯದ ಉಡುಪು ತೊಟ್ಟು ಕೈಯ್ಯಲ್ಲಿ ಹಣತೆ ಹಣತೆ ಹಿಡಿದು ಆಗಮಿಸಿದ ಕಲಾವಿದರು ಲಕ್ಷ್ಮೀಶನ ಜೈಮಿನಿ ಭಾರತದ ಪ್ರಾಥನೆಯೊಂದಿಗೆ ಕಾವ್ಯಾಭಿನಯಕ್ಕೆ ನಾಂದಿ ಹಾಡಿದರು. ಅನಂತರ ನೇರವಾಗಿ ’ ಶ್ರೀವನಿತೆಯರಸನೇ ವಿಮಲ ರಾಜೀವ ಪೀಠನ ಪಿತನೆ’ ಎಂಬ ಕುಮಾರವ್ಯಾಸನ ಆರಂಭದ ನಾಂದಿ ಪದ್ಯದ ಭಾಮಿನಿ ಷಟ್ಪದಿಗೆ ಜಿಗಿದರು.

ನವ್ಯ ಕಾವ್ಯದ ಪ್ರಾನಿಧಿಕ ಕವಿಗಳ ಕವನ ಸಂಕಲನ ’ಅಕ್ಷರ ಹೊಸ ಕಾವ್ಯದ’ ದ ಮುನ್ನುಡಿಯಲ್ಲಿ ಲಂಕೇಶ್ ಹೇಳಿದ ಮಾತುಗಳನ್ನು ಕಲಾವಿದೆಯೊಬ್ಬಳು ಉದ್ಧರಿಸುತ್ತಿದ್ದಂತೆ ಕಲಾವಿದನೊಬ್ಬ ಗೋಪಾಲಕೃಷ್ಣ ಅಡಿಗರ ’ಭೂತ’ ಕವನದ ’ ಕಾಡುತ್ತಿವೆ ಭೂತ ಕಾಲದ ಭ್ರೂಣ ಗೂಢಗಳು’ ಎಂದು ರಂಗದ ಮಧ್ಯಕ್ಕೆ ಬರುತ್ತಾನೆ. ಆತನ ಮೇಲೆ ಬೆಳಕು ಕೇಂದ್ರೀಕೃತವಾಗುತ್ತದೆ. ಮತ್ತೆ ಕ್ಲಾವಿದೆಯಿಂದ ಸುಪ್ರಸಿದ್ಧ ವಿಮರ್ಶಕ ದಿ. ಡಿ.ಆರ್.ನಾಗರಾಜ್ ರವರ ’ಶಕ್ತಿ ಶಾರಧೆಯ ಮೇಳ’ ವಿಮರ್ಶಾ ಗ್ರಂಥದ ಸಾಲುಗಳು...

ಹೀಗೆ ಏನನ್ನೋ ಹೇಳ ಹೊರಟಂತೆ ಸಾಗುತ್ತಿದ್ದ ’ಕಾವ್ಯ ಸಂಚಯ’ ಕುವೆಂಪು ಅವರ ’ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಮತ್ತು ಕಲ್ಕಿ’, ಬೇಂದ್ರೆಯ ’ಸಖೀ ಗೀತ’ ಚಂದ್ರಶೇಖರ ಕಂಬಾರರ ’ಪುಷ್ಫರಾಣಿ’, ಕೆ.ಎಸ್. ನರಸಿಂಹಸ್ವಾಮಿಯವರ ’ಗಡಿಯಾರದಂಗಡಿಯ ಮುಂದೆ ಬೆದರಿದ ಕುದುರೆ...’ ಸಿದ್ಧಲಿಂಗಯ್ಯನವರ ’ಕರಾಳ ರಾಣಿಯ ಕಥೆ’ ಪ್ರತಿಭಾನಂದಕುಮಾರರ ’ನಾವು ಹುಡುಗಿಯರೇ ಹೀಗೆ ಕಣೆ ಉಷಾ’ ಕವನಗಳನ್ನು ಪ್ರೇಕ್ಷಕರ ಮನೋರಂಗದಲ್ಲಿ ದೃಶ್ಯವಾಗಿಸಲು ಪ್ರಯತ್ನಿಸಿತು.

ಆದಿ ಕವಿ ಪಂಪನ ’ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಂ’ ಎಂಬ ಕಾವ್ಯದ ತುಣುಕಿನೊಂದಿಗೆ ಕಾವ್ಯ ಸಂಚಯ ಮುಕ್ತಾಯಗೊಂಡಿತು.

ಸಾಂಕೇತಿಕ ರಂಗಸಜ್ಜಿಕೆಯೊಂದಿಗೆ ರಂಗಪರಿಕರಗಳಿಲ್ಲದೆ ಕಾವ್ಯವನ್ನು ದೃಶ್ಯವಾಗಿಸುವಾಗ ಸಂಗೀತ, ಬೆಳಕು ಮತ್ತು ಕಲಾವಿದರ ಸ್ವರಗಳ್ ಏರಿಳಿತಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಈ ದೃಷ್ಟಿಯಿಂದ ಕಲ್ಕಿ, ಕರಾಳ ರಾಣಿಯ ಕಥೆ ಮತ್ತು ನಾವು ಹುಡುಗಿಯರೇ ಹೀಗೆ ಕಣೆ ಉಷಾ ಈ ಮೂರೂ ದೃಶ್ಯಕಾವ್ಯವೆನಿಸಿಕೊಂಡವು. ಪಂಪನ ಚಂಪೂ ಕಾವ್ಯ ಚರ್ಚ್ ನ ಪ್ರಾಥನಾ ಗೀತೆಯಂತೆ ಗಿಟಾರ್ ನೊಂದಿಗೆ ಮುಕ್ತಾಯ ಕಂಡಿದ್ದು ಸಾಂಕೇತಿಕವಾಗಿತ್ತು.

ಕಾವ್ಯ ಸಂಚಯಕ್ಕೆ ಕವನಗಳನ್ನು ಯಾವ ಮಾನದಂಡದಿಂದ ಆಯ್ಕೆ ಮಾಡಲಾಗಿದೆ ಎಂಬುದು ಸ್ಪಷ್ಟವಾಗಲಿಲ್ಲ. ವಚನ ಚಳುವಳಿಯ ಪ್ರಾನಿಧಿಕ ಕವನದ ಗೈರು ಹಾಜರಿ ಸ್ಪಷ್ಟವಾಗಿತ್ತು. ಇಲ್ಲಿ ನಾವು ತಿಳಿಯಬೇಕಾದ ವಿಷ್ಯ ಒಂದಿದೆ. ಅಭಿನಯಕ್ಕೊಂದು ಮಿತಿಯಿದೆ. ವಿಮರ್ಶೆಗೊಂದು ಚೌಕಟ್ಟಿದೆ. ಆದರೆ ಕಾವ್ಯ ಈ ಎಲ್ಲಾ ಮಿತಿ ಹಾಗೂ ಚೌಕಟ್ಟುಗಳನ್ನು ಮೀರಿದ್ದು. ಅದನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಮಟ್ಟಿನ ಪೂರ್ವ ಸಿದ್ಧತೆ ಬೇಕು. ಅದನ್ನೇ ಕಾವ್ಯಮೀಮಾಂಸಕರು ’ಸಹೃದಯತೆ’ ಅಂದಿದ್ದಾರೆ.
ಪ್ರೇಕ್ಷಕನಿಗೂ ಸಹೃದಯನಿಗೂ ವ್ಯತ್ಯಾಸವಿದೆ. ಕಾವ್ಯ ಓದುಗನ ಅಥವಾ ಕೇಳುಗನ ಕಲ್ಪನಾ ಸಾಮರ್ಥ್ಯವನ್ನು ವಿಸ್ತರಿಸುತ್ತಾ ಬೆಳೆಯುತ್ತದೆ. ಅದನ್ನು ಒಂದು ನಿರ್ಧಿಷ್ಟ ಚೌಕಟ್ಟಿನೊಳಗೆ ತರುವುದು ಕಷ್ಟಸಾಧ್ಯ. ಅಂಥ ಪ್ರಯತ್ನವನ್ನು ರಂಗಾಯಣ ತಂಡ ಮಾಡಿದೆ. ರಂಗಭೂಮಿಯ ಚೌಕಟ್ಟುಗಳು ವಿಸ್ತಾರಗೊಳ್ಳುತ್ತಾ ಹೊಸ ಹೊಸ ಸಾಧ್ಯತೆಗಳ ಹುಡುಕಾಟ್ದಲ್ಲಿ ತೊಡಗಿಸಿಕೊಂಡಿದೆ. ಇದೊಂದು ಆಶಾಧಾಯಕ ಬೆಳವಣಿಗೆ. ಪ್ರಗತಿಪರ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ’ಬಹುಮುಖಿ’ ಸಂಘಟನೆ ಕನ್ನಡ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ’ಕಾವ್ಯ ಸಂಚಯ’ವನ್ನು ರಂಗಾಸಕ್ತರಿಗೆ ನೀಡಿ ಉತ್ತಮ ಕಾರ್ಯ ಮಾಡಿದೆ.

[  ೨೦೦೩ ರ ಜನವರಿ ೨೪ರ ’ಸೂರ್ಯ’ ವಾರಪತ್ರಿಕೆಗಾಗಿ ಬರೆದ ಬರಹ,
ಸೆಲ್ಲರ್ ನಲ್ಲಿದ್ದ ಬೇಡದ ವಸ್ತುಗಳನ್ನು ಗುಜರಿಗೆ ಹಾಕುವಾಗ ಸಿಕ್ಕಿತು. 
ಇನ್ನೂ ಕೆಲವು ಬರಹಗಳಿವೆ. ಇದರ ಹಾಗೆ ಅವಕ್ಕೂ ಒಂದು ಗತಿ ಕಾಣಿಸಬೇಕು! ]No comments:

Post a Comment