Total Pageviews

Saturday, November 24, 2012

ಮುರಳಿಯ ಮೋಹನ ಗಾನವದೆಲ್ಲಿ?

ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಗೀತ ನಾಟಕಗಳ ಪ್ರಯೋಗ ಆಗಿದ್ದು ಕಡಿಮೆ. ಅದರ ಪ್ರಯೋಗಕ್ಕೆ ಬೇಕಾದ ಅಗತ್ಯಗಳು ಬೇರೆಯೇ ತೆರನಾಗಿರುವುದು ಅದಕ್ಕೆ ಕಾರಣ.
ಗೀತ ನಾಟಕವೆಂದರೆ ಗೀತೆಗಳಿಂದಲೇ ಕ್ರಿಯೆಯು ನಡೆಯುವ ನಾಟಕ. ಇಲ್ಲಿ ನಾಟಕೀಯ ಘಟನೆಗಳಿಗಿಂತ ಸಾಹಿತ್ಯ, ಕಾವ್ಯ ಮತ್ತು ಸಂಗೀತವೇ ಪ್ರಧಾನ ಪಾತ್ರ ವಹಿಸುತ್ತವೆ. ಹಾಗೂ ಇದರಲ್ಲಿ ಅಭಿನಯದ ಜತೆಗೆ ಸಂಗೀತ ಜ್ನಾನವೂ ಕಲಾವಿದರಿಗೆ ಅತ್ಯಗತ್ಯ. ಸ್ವಲ್ಪಮಟ್ಟಿನ ನೃತ್ಯದ ಅರಿವು ಕೂಡಾ. ನಿರ್ದೇಶಕನಿಗೆ ಇದೆಲ್ಲೆದರ ಮೇಳೈಸುವಿಕೆ ಸಾಧ್ಯವಾದರೆ ಆ ಪ್ರಯೋಗ ಯಶಸ್ವಿಯಾಗುತ್ತದೆ..
ತೆಲುಗು, ತಮಿಳು, ಬಂಗಾಲಿ ಭಾಷೆಗಳಲ್ಲಿ.ಗೀತ ನಾಟಕಗಳು ಇದ್ದರೂ ಕನ್ನಡದಲ್ಲಿ ಇವುಗಳ ಸಂಖ್ಯೆ ಜಾಸ್ತಿ. ಒಂದು ರೀತಿಯಲ್ಲಿ ಭಾರತೀಯ ಸಾಹಿತ್ಯ ಪರಂಪರೆಗೆ ಗೀತ ನಾಟಕಗಳು ಕನ್ನಡದ ವಿಶಿಷ್ಟ ಕೊಡುಗೆ ಎನ್ನಬಹುದು. ಪು.ತಿ.ನ ಎರಡೇ ಗೀತ ನಾಟಕಗಳನ್ನು ಬರೆದರೂ ಈ ಪ್ರಕಾರದಲ್ಲಿ ಅವರ ಹೆಸರು  ದೊಡ್ಡದು. ಮೇಲು ಕೋಟೆಯ ಈ ಕವಿ ಕೃಷ್ಣನ ಅನನ್ಯ ಭಕ್ತ. ಭಕ್ತಿ ಪರಂಪರೆಯ ಮುಂದುವರಿಕೆಯ ಭಾಗ ಇವರ ಕಾವ್ಯ ಸೃಷ್ಟಿ.
’ಗೋಕುಲ ನಿರ್ಗಮನ’ ೧೯೪೯ರಲ್ಲಿ ಪು.ತಿ.ನ ಬರೆದ ಎರಡನೆಯ ಗೀತ ನಾಟಕ. ’ಅಹಲ್ಯೆ’ ೧೯೪೧ ರಲ್ಲಿ ಪ್ರಕಟವಾಗಿತ್ತು.
ಬಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾರಂತರದ್ದು ದೊಡ್ಡ ಹೆಸರು. ಅವರ ನಾಟಕಗಳಲ್ಲಿ ಸಂಗೀತವೇ ವಿಜೃಂಭಿಸುತ್ತದೆ. ಅದರಲ್ಲೂ ಜಾನಪದ ವಾದ್ಯ ಸಂಗೀತ ಮತ್ತು ಜಾನಪದ ಮಟ್ಟುಗಳು ಯಾವಾಗಲೂ ಮುನ್ನೆಲೆಯಲ್ಲಿ ಇರುತ್ತವೆ. ಹೊಸ ಹೊಸ ಪ್ರಯೋಗಗಳಿಗೆ ಅವರು ಸದಾ ಮುಂದಾಗುತ್ತಾರೆ. ಇಂತಹ ಕಾರಂತರು  ಪು.ತಿ,ನ. ರವರ ’ಗೋಕುಲ ನಿರ್ಗಮನ’ವನ್ನು ನೀನಾಸಂ ತಿರುಗಾಟಕ್ಕಾಗಿ ಹತ್ತು ವರುಷಗಳ ಹಿಂದೆ ನಿರ್ದೇಶಿಸಿದ್ದರು. ಆಗ ಅದು ಯಶಸ್ವಿಯಾಗಿ ನೂರೈವತ್ತಕ್ಕೂ ಹೆಚ್ಚಿನ ಪ್ರದರ್ಶನವನ್ನು ಕಂಡಿತ್ತು.
ಇದೇ ಕಾರಂತರು ಹುಟ್ಟು ಹಾಕಿದ್ದ ’ ಬೆನಕ’ ನಾಟಕ ತಂಡ ಈಗ ’ಗೋಕುಲ ನಿರ್ಗಮನ’ವನ್ನು ಮತ್ತೆ ರಂಗದ ಮೇಲೆ ತಂದಿದೆ. ಇದರ ನಿರ್ದೇಶಕರು ಟಿ.ಎಸ್.ನಾಗಾಭರಣ. ಈಗ ಸಿನೇಮಾ ಮತ್ತು ಕಿರುತೆರೆಯೆಡೆ ತಮ್ಮ ಗಮನವನ್ನು ಬಹು ಮಟ್ಟಿಗೆ ಕೇಂದ್ರೀಕರಿಸಿರುವ ನಾಗಾಭರಣ ಒಂದು ಕಾಲದಲ್ಲಿ ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ ಹೆಸರು ಮಾಡಿದವರು.
ಹಲವಾರು ಪುನರ್ ಪ್ರದರ್ಶನಗಳನ್ನು ಕಂಡ ನಾಟಕವೊಂದನ್ನು ಇನ್ನೊಬ್ಬ ನಿರ್ದೇಶಕ ಕೈಗೆತ್ತಿಕೊಂಡಾಗ ಆತನ ಮುಂದಿರುವ ಸವಾಲು ಮತ್ತು ಜವಾಬ್ದಾರಿ ಹೆಚ್ಚು. ಅಲ್ಲಿ ಆತ ತನ್ನ ಸೃಜನಶೀಲತೆಯನ್ನು ತೋರಬೇಕಾಗುವುದು ಅನಿರ್ವಾಯ. ಈ ದೃಷ್ಟಿಯಿಂದ ನೋಡಿದರೆ ಹಳೆಯ ಪಾತ್ರಧಾರಿಗಳ ಬದಲು ಹೊಸ ನಟ-ನಟಿಯರು ಕಾಣಿಸಿಕೊಂಡಿದ್ದಾರೆ ಅಷ್ಟೇ. ಕಾರಂತರ ಪ್ರಯೋಗದ ಯಥಾವತ್ ಕಾಪಿ ಇದು. ನಾಗಾಭರಣರ ಉದ್ದೇಶ ಅದೇ ಇದ್ದಿರಬಹುದೇನೋ ಗೊತ್ತಿಲ್ಲ.

ತಮಗೆ ಒಪ್ಪಿಸಿದ ಕೆಲಸವನ್ನು ಈ ಪಾತ್ರಧಾರಿಗಳು ಅಚ್ಚುಕಟ್ಟಾಗಿಯೇ ನಿರ್ವಹಿಸಿದ್ದಾರೆ. ಶ್ರೀಕೃಷ್ಣ ಪಾತ್ರಧಾರಿ ಮೈಕೋ ಮಂಜುನಾಥ್ ತುಂಟ ಕೃಷ್ಣನಾಗಿ, ಮುರಳಿಲೋಲನಾಗಿ ಪಾತ್ರಕ್ಕೆ ಶಕ್ತಿ ಮೀರಿ ಜೀವ ತುಂಬಿದ್ದಾರೆ. ಆದರೆ ಅವರಿಗೆ ಸರಿ ಜೋಡಿಯಾಗಿ ಪಾತ್ರ ನಿರ್ವಹಿಸಲು ರಾಧೆಯಾಗಿ ಅಭಿನಯಿಸಿದ ವಿದ್ಯಾವೆಂಕಟರಾಂಗೆ ಸಾಧ್ಯವಾಗಿಲ್ಲ. ರಾಧೆಯದು ಅರ್ಪಣಾ ಭಾವ. ಅದಕ್ಕೆ ಮುಗ್ಧ ಮುಖಭಾವದ ನಟಿ ಬೇಕು.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಗೋಕುಲ ನಿರ್ಗಮನದಲ್ಲಿ ನಟಿಸಿದ ಹೆಚ್ಚಿನ ಎಲ್ಲಾ ನಟ-ನಟಿಯರು ಕಿರುತೆರೆಯಲ್ಲಿ ತೊಡಗಿಸಿಕೊಂಡವರು. ಅದವರಿಗೆ ಬದುಕಿನ ಹಾದಿ. ಹಾಗಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಅವರ ಪಾತ್ರಗಳು ಸೂಪರ್ ಇಂಪೋಸ್ ಆಗುತ್ತಿದ್ದವು. ಮುಕ್ತವಾಗಿ ನೋಡುವುದು ಕಷ್ಟವಾಗುತ್ತಿತ್ತು.

ಬಲರಾಮನಾಗಿ ಪೂರ್ಣಚಂದ್ರ ತೇಜಸ್ವಿ, ಅಕ್ರೂರನಾಗಿ ಟಿ.ಎನ್.ಗಿರೀಶ್ ಕಿರುತೆರೆಯ ಹ್ಯಾಂಗೋವರ್ ನಿಂದ ಸಂಪೂರ್ಣವಾಗಿ ಬಿಡಿಸಿಕೊಂಡಂತಿತ್ತು. ಅಲ್ಲಲ್ಲಿ ಚದುರಿ ಹೋಗಿದ್ದ ಈ ನಟ-ನಟಿಯರನ್ನು ಬೆನಕ ಮತ್ತೆ ರಂಗಭೂಮಿಗೆ ಎಳೆದು ತಂದಿದೆ. ಈ ಎಳೆಯ ಕಲಾವಿದರು ಅಲ್ಲಿ-ಇಲ್ಲಿ ಎರಡೂ ಕಡೆಯೂ ಹೊಂದಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಬೆನಕದ ಕಿರಿಯ ತಲೆಮಾರು ಹಿರಿಯರ ಯಶಸ್ವಿ ನಾಟಕಗಳನ್ನು ಮತ್ತೆ ರಂಗದ ಮೇಲೆ ಪ್ರದರ್ಶಿಸುವ ತಯಾರಿಯಲ್ಲಿದೆ. ಇದು ಒಂದು ರೀತಿಯಲ್ಲಿ ಸ್ವಾಗತಾರ್ಹವೇ ಆದರೂ ಹಿರಿಯರ ನೆರಳಿನಿಂದ ಈಚೆ ಬರುವ ಪ್ರಯತ್ನ ಒಳ್ಳೆಯದು. ಮುಂದಿನ ದಿನಗಳಲ್ಲಿ ಹಯವದನ, ಸಂಗ್ಯಾಬಾಳ್ಯ, ಜೋಕುಮಾರಸ್ವಾಮಿ ಪ್ರದರ್ಶನ ಕಾಣಲಿವೆ. ಹಿಂದಿನ ನಾಟಕಗಳಿಗೆ ಅವರು ಕಾಯಕಲ್ಪ ಮಾಡದಿದ್ದರೆ ಏನನ್ನೂ ಸಾಧಿಸಿದಂತಾಗುವುದಿಲ್ಲ. ಒಂದು ಕೃತಿ ಕಾಲದ ನಿಕಷಕ್ಕೆ ಸಿಕ್ಕಿ ಹೊಳಪುಗೊಳ್ಳುತ್ತಲೇ ಇರಬೇಕು. ಮೊದಲ ಬಾರಿಗೆ ಗೋಕುಲ ನಿರ್ಗಮನವನ್ನು ಹೊಳಪುಗೊಳಿಸಿದವರು ಬಿ.ವಿ.ಕಾರಂತರು. ಅದರ ಸಾರ ಸರ್ವಸ್ವವನ್ನೆಲ್ಲಾ ಹೀರಿ ಅದನ್ನು ರಂಗದ ಮೇಲಿನ ದೃಶ್ಯಕಾವ್ಯವಾಗಿಸಿದರು. ಜನರ ಹತ್ತಿರ ತಂದರು. ಜನರು ಪು.ತಿ.ನರನ್ನು, ಅವರ ಬರವಣಿಗೆಯನ್ನು ಮುಖ್ಯವಾಗಿ ಗೋಕುಲ ನಿರ್ಗಮನವನ್ನು ಮತ್ತೊಮ್ಮೆ ಪುಟ ತಿರುಗಿಸಿ ನೋಡುವಂತಾಯ್ತು.

ಗೋಕುಲ ನಿರ್ಗಮನವನ್ನು ಈಗ ನೀನಾಸಂನವರು ಆಡುತ್ತಿಲ್ಲ. ಆದರೆ ತಮ್ಮ ಶೋ ಅನ್ನು ಅವರು ವಿಡಿಯೋ ಚಿತ್ರೀಕರಣ ಮಾಡಿ ಕಾಯ್ದಿರಿಸಿಕೊಂಡಿದ್ದಾರೆ. ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅದನ್ನು ವ್ಯಾಖ್ಯಾನ, ವಿಮರ್ಶೆಗಳೊಂದಿಗೆ ಪ್ರದರ್ಶಿಸಲಾಯ್ತು. ಅಲ್ಲಿಯ ಶಿಬಿರಾರ್ಥಿಗಳು ಅದನ್ನು ಮಂತ್ರಮುಗ್ಧರಾಗಿ ವೀಕ್ಷಿಸಿದರು. ಭಾವುಕರಾಗಿ ಅದರ ಚರ್ಚೆಯಲ್ಲಿ ಪಾಲ್ಗೊಂಡರು.

ಒಂದು ರಂಗಪ್ರಯೋಗದ ಫಲಶ್ರುತಿಯ ಬಗ್ಗೆ ಬೇರೆ ಬೇರೆ ಜನರಲ್ಲಿ ಬೇರೆ ಬೇರೆ ಅಭಿಪ್ರಾಯಗಳಿರಬಹುದು. ಆದರೆ ಗೋಕುಲ ನಿರ್ಗಮನದ  ಪ್ರದರ್ಶನ ನೀಡುವ ಅನುಭವ ಅಲೌಕಿಕವಾದುದು. ಅದು ನಮ್ಮ ಭಾವಲೋಕದ ಮೃದು ಮಧುರವಾದ ಭಾವನೆಗಳನ್ನು ಮೀಟುವುದರ ಜೊತೆಗೆ ಯಾವುದೋ ಅಲೌಕಿಕವಾದುದರ ಕಡೆಗೂ ನಮ್ಮ ಲಕ್ಷ್ಯವನ್ನು ಸೆಳೆಯುತ್ತದೆ. ಗೀತ ನಾಟಕಗಳ ಯಶಸ್ಸು ಇರುವುದೇ ಇಲ್ಲಿ. ವಾಸ್ತವದಿಂದ ದೂರ ಸರಿದಷ್ಟು ಭಾವಲೋಕ ಶ್ರೀಮಂತಗೊಳ್ಳುತ್ತದೆ.

ಗೋಕುಲ ನಿರ್ಗಮನಕ್ಕೆ ಇನ್ನೊಮ್ಮೆ ಸಾಣೆ ಹಿಡಿಯುವ ಸಂದರ್ಭ ನಾಗಾಭರಣರಿಗೆ ಒದಗಿ ಬಂದಿತ್ತು. ಆದರೆ ಅವರು ಅದರೆಡೆಗೆ ಗಮನ ಹರಿಸಲಿಲ್ಲ. ಅಂದು ಸ್ವಾತಂತ್ರ್ಯ ಪೂರ್ವದಲ್ಲಿ ಪು.ತಿ.ನರವರು ಗೊಲ್ಲತಿಯ ಭಾವ ತಳೆದು ಗೋಕುಲ ನಿರ್ಗಮನವನ್ನು ಬರೆದಂತೆ ಇಂದು ಈ ಕಾಲಘಟ್ಟದಲ್ಲಿ ನಿಂತು ಆ ಗೋಕುಲದ ಪಾತ್ರಗಳ ಪರಕಾಯ ಪ್ರವೇಶ ಮಾಡಿ ಅವರ ಮನಸ್ಸು ಬಗೆದಿದ್ದರೆ ಹೊಸ ವ್ಯಾಖ್ಯಾನಗಳು ದೊರೆಯುತ್ತಿದ್ದವೇನೋ..!

ಕಳೆದ ವರ್ಷ ಸುರೇಶ್ ಅನಗಳ್ಳಿಯವರು ಮೇಘದೂತವನ್ನು ಎಡಪಂಥೀಯ ದೃಷ್ಟಿಕೋನದಿಂದ ನೋಡಿ ರಂಗದ ಮೇಲೆ ತಂದಿದ್ದರು. ಒಬ್ಬ ವ್ಯಕ್ತಿಯ ಭಾವಲೋಕದ ವಿವರಗಳಿಗೆ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಸಾಧ್ಯವಾಗುವುದಾದರೆ ಗೋಕುಲ ನಿರ್ಗಮನದಂತಹ ಹಲವು ಆಯಾಮದ ಕೃತಿಗೆ ಯಾಕೆ ಸಾಧ್ಯವಾಗಲಾರದು?

ಕನ್ನಡದ ಪ್ರಸಿದ್ಧ ವಿಮರ್ಶಕರಾಗಿದ್ದ ಡಾ.ಡಿ.ಆರ್ ನಾಗರಾಜ್ ರವರು ಗೋಕುಲ ನಿರ್ಗಮನದಲ್ಲಿ ಧರ್ಮ-ಕಾಮದ ಸಂಘರ್ಷವನ್ನು ಕಂಡಿದ್ದಾರೆ. ಕೊಳಲನ್ನು ಜೀವ ಕಾಮದ ಸಂಕೇತವಾಗಿ ನೋಡಿದ್ದಾರೆ. ಇನ್ನು ಕೆಲವರು ಗ್ರಾಮ ಸಂಸ್ಕೃತಿ ಮತ್ತು ನಗರ ಸಂಸ್ಕೃತಿಯ ಸಂಘರ್ಷವನ್ನು ಇಲ್ಲಿ ಕಂಡಿದ್ದಾರೆ. ಕಿ.ರಂ. ನಾಗರಾಜ್ ರವರು ಗೋಕುಲದ ಪರಿಸರದಲ್ಲಿ ತಾಯ್ತನ, ಹೆಣ್ತನದ ಭಾವವನ್ನು ಕಂಡಿದ್ದಾರೆ. ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ ಹೆಣ್ಣು ಜೀವವೊಂದಕ್ಕೆ ಈ ಕೃತಿ ಪ್ರಕೃತಿ-ಪುರುಷರ ನಡುವಿನ ನಿರಂತರ ಆಕರ್ಷಣೆ ಮತ್ತುವಿಯೋಗದ ಸ್ಥಾಯೀ ಭಾವವಾಗಿ ಕಾಣುತ್ತದೆ. ರಾಧೆ ಆ ನಿರಂತರ ಪ್ರೇಮದ ಮೂರ್ತ ರೂಪ. ಅದು ಅಲೌಕಿಕವಾದುದು. ಆಕೆಯಲ್ಲಿರುವ ಅರ್ಪಣಾ ಭಾವಕ್ಕೆ ಲೌಕಿಕದ ಯಾವ ಕಟ್ಟುಪಾಡುಗಳೂ ಇಲ್ಲ. ಈ ಬಾವದಲ್ಲಿ ಆಕೆಯ ಸಖಿಯರೂ ಪಾಲ್ಗೊಳ್ಳುತ್ತಾರೆ. ಗೋಪಾಲಕರೂ ಸೇರಿದಂತೆ ಇಡೀ ನಂದಗೋಕುಲ ಭಾಗಿಯಾಗುತ್ತದೆ; ಸಾಮೂಹಿಕ ಅರ್ಪಣಾ ಭಾವ.

ಎಲ್ಲವನ್ನೂ ಸ್ವೀಕರಿಸಿ ತನ್ನಲ್ಲಿ ಕಾಪಿಡುವ ಪ್ರಕೃತಿ. ಒಂದು ಹಂತದವರೆಗೆ ಮಾತ್ರ ಆಕೆಯಲ್ಲಿ ಜೀವಶಕ್ತಿ ತುಂಬಿ ನಂತರ ನಿರ್ಗಮಿಸುವ ಪುರುಷ, ಇಂದಿಗೂ ಆಧುನಿಕ ಸ್ತ್ರೀಯರನ್ನು ಕಾಡುವ ನಿಗೂಢ. ಸಂಸಾರದಲ್ಲಿ ಇದ್ದುಕೊಂಡೇ ಅದರಿಂದ ಬಿಡುಗಡೆಗಾಗಿ ಹಂಬಲಿಸುವ ಆಕೆಗೆ ಮುರಳಿಗಾನ ಬದುಕನ್ನು ಮುನ್ನಡೆಸುವ ಶಕ್ತಿ.

ಇಷ್ಟೆಲ್ಲಾ ಸಾಧ್ಯತೆಗಳು, ಆಳ-ವಿಸ್ತಾರಗಳನ್ನೊಳಗೊಂಡ ಕೃತಿಯನ್ನು ಒಂದು ರಮ್ಯಕಥನವಾಗಿಸಿ ದೃಶ್ಯಕಾವ್ಯವಾಗಿಸಿದ್ದಾರೆ ಬಿ.ವಿ.ಕಾರಂತರು. ನಾಗಾಭರಣ ಇದರಲ್ಲಿರುವ ಧ್ವನಿಶಕ್ತಿಯನ್ನು ಗುರುತಿಸಿ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನ ಮಾಡಬಹುದಿತ್ತು. ಆದರೆ ಅದು ಒಂದು ’ಸಿಂಡ್ರೆಲ್ಲಾ’ ಶೋದ ಮಟ್ಟಕಷ್ಟೇ ಸೀಮಿತಗೊಂಡಿದೆ.

[’ಹಂಗಾಮ’ ನಿಯತಕಾಲಿಕದ ೨೦೦೪ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಲೇಖನ ]


1 comment:

  1. ನಾಟಕಗಳನ್ನು ಈಗೀಗೆ ನೋಡಲು ಶುರುವಿಟ್ಟ ನನಗೆ ಇ೦ತಹ ಕಾನ್ಸೆಫ್ಟಿನ ನಾಟಕಗಳನ್ನು ಊಹೆ ಮಾಡಿಕೊಳ್ಳಲು ಅಸಾಧ್ಯ. ಅದರ ಮಧ್ಯೆ ಅಷ್ಟೋ೦ದು ಜನ ಪ್ರತಿಭಾಶಾಲಿಗಳು ಅದರ ಹಿ೦ದೆ ದುಡಿದ ಬಗೆ, ಕಲೆಗೆ ಗೌರವದ ದ್ಯೋತಕ.
    ನಾಟಕಗಳನ್ನು ನಿಮ್ಮ ವಿಮರ್ಶೆಯ ಮೂಲಕ ಓದಿದರೆ/ನಿಮ್ಮ ವಿವರಣೆಯ ಮುಖೇನ ಓದಿದರೆ...ಒ೦ದು ತೆರನಾದ ಖುಶಿ ಕೊಡುತ್ತದೆ.

    ReplyDelete