ಚಿತ್ರ ಕೃಪೆ; ಅಂತರ್ಜಾಲ |
ಇದು ’ಡಿಯರ್ ಲಿಯರ್’ ನಾಟಕದ ನಿರ್ದೇಶಕ ಎಸ್.ಆರ್.ರಮೇಶ್ ತಮ್ಮ ನಾಟಕ ಪ್ರಯೋಗದ ಪುಸ್ತಿಕೆಯಲ್ಲಿ ಹೇಳಿಕೊಂಡ ಮಾತುಗಳು.
ಇದೇ ಹೋಲಿಕೆಯನ್ನು ಅವರು ಯಾಕೆ ಕೊಟ್ಟುಕೊಂಡ್ರೋ ಗೊತ್ತಿಲ್ಲ. ಆದರೆ ಶಿಖರ ಹತ್ತುವ ಪ್ರಯತ್ನವೊಂದು ಬಹುಮಟ್ಟಿಗೆ ಯಶಸ್ವಿಯಾಗಿದೆ.
ಮೈಸೂರಿನ ಹವ್ಯಾಸಿ ರಂಗಭೂಮಿಯಲ್ಲಿ ಕಳೆದ ಎರಡು ವರ್ಷಗಳಿಂದ ಕ್ರಿಯಾಶೀಲವಾಗಿರುವ ’ ಪರಿವರ್ತನ’ ತಂಡ ಈ ನಾಟಕವನ್ನು ಅಭಿನಯಿಸಿತ್ತು.
ಕರ್ನಾಟಕ ನಾಟಕ ಅಕಾಡಮಿ ಹಮ್ಮಿಕೊಂಡು ಬಂದಿರುವ ತಿಂಗಳ ನಾಟಕ ಮಾಲಿಕೆಯಡಿ ಏಪ್ರೀಲ್ ತಿಂಗಳ ನಾಟಕವಾಗಿ ಎಚ್.ಎಸ್.ಶಿವಪ್ರಕಾಶ್ ಅನುವಾದಿಸಿರುವ ಷೇಕ್ಸ್ಪಿಯರ್ ನ ’ಕಿಂಗ್ ಲಿಯರ್’ ನಾಟಕ ’ ಡಿಯರ್ ಲಿಯರ್’ ಆಗಿ ಪ್ರಯೋಗಗೊಂಡಿತ್ತು.
ಷೇಕ್ಸ್ ಪಿಯರ್ ನ ’ಕಿಂಗ್ ಲಿಯರ್’ ಆತನ ಇತರ ದುರಂತ ನಾಟಕಗಳಂತೆ ಬಹು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ ರಂಗಭೂಮಿಯಲ್ಲಿ ಪ್ರಯೋಗಗೊಂಡಿದ್ದು ವಿರಳ. ಕನ್ನಡ ರಂಗಭೂಮಿಗಂತೂ ಇದು ಹೊಸ ಪ್ರಯತ್ನವಾಗಿರಬೇಕು.
ಷೇಕ್ಸ್ ಪಿಯರ್ ನ ದುರಂತ ನಾಟಕಗಳಲ್ಲಿ ಕಥಾನಾಯಕರಿಗಿಂತ ಖಳನಾಯಕರು ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ. ಇಲ್ಲಿ ಒಳಿತು ಕೆಡುಕುಗಳ ಸಮತೋಲನವಿರುತ್ತದೆ. ಮನುಷ್ಯಪ್ರಯತ್ನವನ್ನು ಮೀರಿದ ಘಟನೆಗಳು ಜರಗುತ್ತವೆ.
ಆದರೆ ಕಿಂಗ್ ಲಿಯರ್ ನಾಟಕದಲ್ಲಿ ಲಿಯರ್ ನಾಟಕದ ನಾಯಕನಾಗಿ, ಅದರಲ್ಲೂ ಅಸಂಗತ ನಾಯಕನಾಗಿ ಬಿಂಬಿತನಾಗುತ್ತಾನೆ.ತನ್ನ ರಾಜ್ಯವನ್ನು ಮೂವರು ಹೆಣ್ಣುಮಕ್ಕಳಿಗೆ ಸಮನಾಗಿ ಹಂಚಲು ನಿರ್ಧರಿಸಿ ’ನೀವು ನನ್ನನ್ನೆಷ್ಟು ಪ್ರೀತಿಸುತ್ತೀರಿ?’ ಎಂದು ಪ್ರಶ್ನೆ ಹಾಕಿ ಅವರಿಂದ ಉತ್ತರವನ್ನು ಪಡೆಯಬಯಸುತ್ತಾನೆ. ಮೊದಲ ಹೆಣ್ಣುಮಕ್ಕಳಾದ ಗಾನರಿಲ್ ಮತ್ತು ಲೀಗನ್ ತಮ್ಮ ಪ್ರೀತಿಯ ಆಳವನ್ನು ಮಾತುಗಳಲ್ಲಿ ವ್ಯಕ್ತಪಡಿಸುತ್ತಾರೆ. ದೊರೆ ಲಿಯರ್ ಅವರನ್ನು ಪುರಸ್ಕರಿಸುತ್ತಾನೆ. ಆದರೆ ಕೊನೆಯ ಮಗಳು ಕಾರ್ಡಿಲೀಯಾ ತನ್ನ ಪ್ರೀತಿಯನ್ನು ಮಾತುಗಳಲ್ಲಿ ವ್ಯಕ್ತಪಡಿಸಲಾರದಷ್ಟು ಗಾಢವಾಗಿ ತಂದೆಯನ್ನು ಪ್ರೀತಿಸಿರುತ್ತಾಳೆ.
ಕಾರ್ಡಿಲೀಯಾಳ ಮಾತಿನ ಹಿಂದಿನ ಭಾವವನ್ನು ಗ್ರಹಿಸಲಾರದ ದೊರೆ ಅವಳನ್ನು ಶಪಿಸಿ ಪ್ರಾನ್ಸ್ ಗೆ ಅಟ್ಟುತ್ತಾನೆ. ಈ ನಿರ್ಧಾರ ಅವನ ಇಳಿವಯಸ್ಸಿನ ಅಸಹಾಯಕತೆ, ಹಪಹಪಿಕೆ, ಭ್ರಾಂತಿಗೆ ಕಾರಣವಾಗುತ್ತದೆ. ಇಲ್ಲಿ ಬೋಳೆತನ, ನಂಬಿಕೆ ದ್ರೋಹ, ಸಂಬಂಧಗಳ ಶಿಥಿಲತೆ, ಕುಟಿಲ ರಾಜಕಾರಣ ಎಲ್ಲವೂ ಇದೆ.
ಅನೈತಿಕ ಮಗ ಎಡ್ಮಂಡ್ ನ ಕುತಂತ್ರಕ್ಕೆ ಒಳಗಾಗುವ ಗ್ಲೂಸ್ಟರ್, ಒಳ್ಳೆಯತನದ ಪ್ರತೀಕವಾಗಿರುವ ಆತನ ಅಧಿಕೃತ ಪುತ್ರ ಎಡ್ಗರ್, ಲಿಯರ್ ನ ಹಿತೈಸಿ ಕೆಂಟ್ ಎಲ್ಲರೂ ಲಿಯರ್ ನ ಸುತ್ತ ಸುತ್ತುತ್ತಿರುತ್ತಾರೆ.
ಅನುವಾದಕರ ’ಕಿಂಗ್ ಲಿಯರ್’ ನಾಟಕವನ್ನು ನಿರ್ದೇಶಕರು ’ಡಿಯರ್ ಲಿಯರ್’ ಎಂದು ಕರೆದಿರುವುದೇ ಅವರು ನಾಟಕವನ್ನು ಆಪ್ತ ಮಟ್ಟದಲ್ಲಿ ನೋಡಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಂತಿತ್ತು. ಆದರೆ ’ಕಿಂಗ್ ಲಿಯರ್ ಉತ್ತಮ ಅನುವಾದವೇನೂ ಅಲ್ಲ. ಅದು ರಂಗ ಪ್ರಯೋಗದಲ್ಲೂ ಪ್ರತಿಫಲಿಸಿತ್ತು.
ನಾಟಕ ರಚನೆಕಾರನೊಬ್ಬನಿಗೆ ರಂಗಪ್ರಯೋಗದ ಬಗ್ಗೆಯೂ ಆಳ್ವಾದ ಜ್ನಾನವಿದ್ದಾಗ ಅತ್ಯುತ್ತಮ ನಾಟಕವೊಂದು ರೂಪ ಪಡೆಯುವುದು ಸಾಧ್ಯ. ಕಳೆದ ತಿಂಗಳು ಇದೇ ರವೀಂದ್ರ ಕಲಾಕ್ಷೇತ್ರದಲ್ಲಿ ಷೇಕ್ಸ್ ಪಿಯರನ ’ ಹ್ಯಾಮ್ಲೆಟ್’ ನಾಟಕ ಪ್ರದರ್ಶನಗೊಂಡಿತ್ತು. ಕನ್ನಡದ ಸ್ವಂತ ನಾಟಕವೆಂಬಷ್ಟು ಪರಿಪೂರ್ಣವಾಗಿ ಪುನರ್ ಸೃಷ್ಟಿಸಲ್ಪಟ್ಟ ಈ ನಾಟಕ ವರ್ಷದ ಅತ್ಯುತ್ತಮ ರಂಗ ಪ್ರಯೋಗ ಎಂದರೂ ತಪ್ಪಾಗಲಾರದು.
ಒಂದು ರಂಗಪ್ರಯೋಗದಲ್ಲಿ ಕೇಂದ್ರ ಪಾತ್ರಗಳಿರುವಷ್ಟೇ ಮಹತ್ವ ಒಬ್ಬ ಬಾಗಿಲು ಕಾಯುವ ಸೇವಕನ ಪಾತ್ರಕ್ಕೂ ಇರುತ್ತದೆ. ಕೇಂದ್ರ ಪಾತ್ರ ಸಮರ್ಥವಾಗಿ ಮೂಡಿ ಬಂದು ಚಿಕ್ಕಪುಟ್ಟ ಪಾತ್ರಗಳು ಲಯ ತಪ್ಪಿದರೆ ನಾಟಕದ ಒಟ್ಟು ಶಿಲ್ಪಕ್ಕೆ ಭಂಗ ಬರುತ್ತದೆ. ’ ಡಿಯರ್ ಲಿಯರ್’ ನಾಟಕದಲ್ಲಿ ಅಲ್ ಬೆನಿ, ಕಾರ್ನ್ ವಾಲ್ ವರ್ತನೆಗಳು, ಗ್ಲೂಸ್ಟರ್ ನ ಕಣ್ಣು ಕಿತ್ತಾಗ ಸೇವಕ ಆಡುವ ಸಾಂತ್ವನದ ಮಾಟುಗಳು-ಇವೆಲ್ಲಾ ಅವಸರದ ಮಾತು ಒಪ್ಪಿಸುವಿಕೆಯಂತಿದ್ದವು.
ನಾಟಕ ತೆರೆದುಕೊಂಡ ಅಸ್ಥಾನದ ಮೊದಲ ದೃಶ್ಯವೇ ಸಾಮಾನ್ಯವಾಗಿತ್ತು. ರಂಗದ ತುಂಬಾ ಹರಡಿಕೊಂಡಿರುವ ಪಾತ್ರಧಾರಿಗಳಲ್ಲಿ ಏಕಸೂತ್ರತೆಯಿರಲಿಲ್ಲ. ದೊರೆ ಲಿಯರನ ಐಲುತನ ಉಳಿದ ಪಾತ್ರಧಾರಿಗಳಲ್ಲಿ ಸಂಚಲನ ತರುತ್ತಿರಲಿಲ್ಲ. ಅಲ್ ಬೆನಿ ಮತ್ತು ಕಾರ್ನ್ ವಾಲ್ ನ ಉಡುಪುಗಳು ಉಳಿದ ಪಾತ್ರಧಾರಿಗಳ ವಸ್ತ್ರ ವಿನ್ಯಾಸಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಸೌಂಡ್ ಸಿಸ್ಟಂ ಸರಿಯಿರಲಿಲ್ಲ. ಉಚ್ಚಾರಣೆಯಲ್ಲಿ ಶುದ್ಧತೆ ಇರಲಿಲ್ಲ.
ಚಿತ್ರ ಕೃಪೆ; ಅಂತರ್ಜಾಲ |
ನಾಟಕದಲ್ಲಿ ಲಿಯರ್ ನ ಮೂವರು ಹೆಣ್ಣುಮಕ್ಕಳು ಮಾತ್ರ ಸ್ತ್ರೀ ಪಾತ್ರಗಳು. ಅವುಗಳಲ್ಲಿ ಸತ್ವವೇ ಇರಲಿಲ್ಲ. ಇದ್ದುದರಲ್ಲಿ ಕಾರ್ಡಿಲೀಯಾ ಅಗಿ ನಟಿಸಿದ ಸನ್ನುತ ಪರವಾಗಿಲ್ಲ. ಇನ್ನುಳಿದಂತೆ ನಿಯರ್ ದೊರೆಯ ವಿಮರ್ಶಕನಂತೆ ಬರುವ ವಿದೂಶಕನ ಪಾತ್ರದಲ್ಲಿ ಮುರಳಿ ಶೃಂಗೇರಿ ಚೆನ್ನಾಗಿಯೇ ಮಿಂಚಿದ್ದಾರೆ.
ಬಿಡಿಬಿಡಿಯಾಗಿ ಕೆಲವು ದೃಶ್ಯಗಳು ಚೆನ್ನಾಗಿದ್ದವು ’ ಜ್ನಾನಿಯ ಜೊತೆ ಮಾತಾಡಬೇಕು’ ಎಂದು ಲಿಯರ್ ಟಾಂ ಜೊತೆ ಸಂಭಾಷಿಸುವ ಸನ್ನಿವೇಶ, ಹಾಗೆಯೇ ಟಾಂ, ಕಯಸ್,ಲಿಯರ್ ಸೇರಿಕೊಂಡು ಲಿಯರ ದೊರೆಯ ಹೆಣ್ಣುಮಕ್ಕಳ ಬೊಂಬೆಗಳನ್ನಿಟ್ಟುಕೊಂಡು ವಿಚಾರಣೆ ನಡೆಸುವ ನ್ಯಾಯಾಲಯ ಸನ್ನಿವೇಶ ಉತ್ತಮವಾಗಿ ಮೂಡಿ ಬಂದಿವೆ. ನಾಟ್ಕದಲ್ಲಿ ಕೊಳಲು ನಾದ ಪರಿಣಾಮಕಾರಿಯಾಗಿತ್ತು. ವಿಷಾದಕ್ಕೆ ಶ್ರ್ರುತಿ ಹಿಡಿಯುತ್ತಿತ್ತು. ಆದರೆ ನಾಟಕದ ಒಟ್ಟು ಸಂಗೀತಕ್ಕೆ ಈ ಮಾತು ಹೇಳುವಂತಿರಲಿಲ್ಲ.
ತಿಂಗಳ ನಾಟಕ ಮಾಲಿಕೆಯಲ್ಲಿ ಮೊದಲ ಬಾರಿಗೆ ಷೇಕ್ಸ್ ಪಿಯರನ ನಾಟಕ ಪ್ರದರ್ಶನಗೊಂಡಿದೆ. ಅಕಾಡಮಿ ತನ್ನ ಇಪ್ಪತೈದನೇ ಪ್ರದರ್ಶನಕ್ಕೆ ಜಗತ್ತಿನ ಮೇರು ನಾಟಕಕಾರನಿಗೆ ಸಲ್ಲಿಸಿದ ಗೌರವ ಇದು. ನಾಟಕಕ್ಕೆ ಬಂದ ಪ್ರೇಕ್ಷಕರಿಗೆ ಲಾಡು ಹಂಚುವುದರ ಮುಖಾಂತರ ಅಕಾಡಮಿ ತನ್ನ ಸಂಭ್ರಮವನ್ನು ರಂಗಪ್ರೇಮಿಗಳಲ್ಲಿ ಹಂಚಿಕೊಂಡದ್ದು ಅರ್ಥಪೂರ್ಣವಾಗಿತ್ತು. ತಿಂಗಳ ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಕಲಾಕ್ಷೇತ್ರವೂ ಭರ್ತಿಯಾಗಿದ್ದು ವಿಶೇಷವಾಗಿತ್ತು.
[ ೨೦೦೪, ಮೇ ೬ ರಂದು ಉದಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ ]